ಕರಾವಳಿ

ಭಾರೀ ಮಳೆಗೆ ಮನೆ ಮೇಲೆ ಆವರಣಗೋಡೆ ಕುಸಿದು ಇಬ್ಬರು ಮಕ್ಕಳು ಮೃತ್ಯು : ಪಡೀಲ್ ಕೊಡಕ್ಕಲ್‌ನಲ್ಲಿ ಘಟನೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.09: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದ ಪಡೀಲ್ ಕೊಡಕ್ಕಲ್ ಶಿವನಗರದಲ್ಲಿ ಭಾನುವಾರ ರಾತ್ರಿ ಸುಮಾರು 20 ಅಡಿ ಎತ್ತರದ ಆವರಣಗೋಡೆ ಮನೆಯೊಂದರ ಮೇಲೆ ಕುಸಿದು ಬಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಕ್ಕಳನ್ನು ಉಪ್ಪಿನಂಗಡಿ ಮೂಲದ ಹಾಗೂ ಪ್ರಸ್ತುತ ಪಡೀಲ್‌ನ ಶಿವನಗರದ ನಿವಾಸಿ ರಾಮಣ್ಣ ಗೌಡ-ರಜನಿ ದಂಪತಿಯ ಮಕ್ಕಳಾದ ವರ್ಷಿಣಿ (9) ಹಾಗೂ ವೇದಾಂತ್ (7) ಎಂದು ಹೆಸರಿಸಲಾಗಿದೆ.ಇವರಿಬ್ಬರು ಪಡೀಲ್ ಸಮೀಪದ ಕಪಿತಾನಿಯೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವರ್ಷಿಣಿ 4ನೇ ಹಾಗು ವೇದಾಂತ್ 2ನೇ ತರಗತಿಯ ವಿದ್ಯಾರ್ಥಿಗಳು.

ಮೋಹಿನಿ ಶೆಟ್ಟಿ ಎಂಬುವರಿಗೆ ಸೇರಿದ ಮನೆಯಲ್ಲಿ ರಾಮಣ್ಣ ಗೌಡ ಅವರ ಕುಟುಂಬ ಹಲವು ಸಮಯಗಳಿಂದ ಬಾಡಿಗೆಗೆ ವಾಸವಿದ್ದರು. ರಾಮಣ್ಣ ಗೌಡ ಮೂಲತಃ ಕಡಬದ ನೂಜಿಬಾಳ್ತಿಲದವರು. ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು.

ಭಾನುವಾರ ಬೆಳಗ್ಗೆಯಿಂದಲೇ ಸುರಿದ ಮಳೆ ಪರಿಣಾಮ, ಮನೆಯ ಹಿಂಬದಿ ಇದ್ದ ಆವರಣಗೋಡೆ ಏಕಾಏಕಿ ಕುಸಿದು ಬಿದ್ದಿದೆ. ತಕ್ಷಣವೇ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ತಂದೆ-ತಾಯಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಸೆ.9ರಂದು ಶಾಲೆಯಲ್ಲಿ ಪರೀಕ್ಷೆ ಇತ್ತು. ಪರೀಕ್ಷೆಯ ಸಿದ್ಧತೆಗಾಗಿ ಮನೆಯ ಆವರಣ ಗೋಡೆ ಸಮೀಪ ಮಕ್ಕಳು ಓದುತ್ತಿದ್ದರು. ರವಿವಾರ ರಾತ್ರಿ 7:50ರ ಸುಮಾರು ಆವರಣ ಗೋಡೆ ಬಿದ್ದಿದೆ. ಈ ವೇಳೆ ಪುಸ್ತಕ ಓದುತ್ತಿದ್ದ ಮಕ್ಕಳಿಬ್ಬರೂ ಮಣ್ಣಿನ ಕೆಳಗೆ ಸಿಲುಕಿದ್ದಾರೆ. ತಕ್ಷಣ ಅಗ್ನಿಶಾಮಕದಳ ಹಾಗೂ ಕಂಕನಾಡಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಮಣ್ಣಿನಡಿ ಸಿಲುಕಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮಕ್ಕಳು ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಮೇಲಿನ ಮನೆಯೂ ಅಪಾಯದಲ್ಲಿದ್ದು, ಸ್ಥಳಾಂತರಕ್ಕೆ ಶಾಸಕ ಕಾಮತ್ ಸೂಚನೆ ನೀಡಿದರು.

ಪಿಡಬ್ಲ್ಯುಡಿ ಹಾಗೂ ತಜ್ಞರ ಸಲಹೆ ಪಡೆದು ಯಾರ ನಿರ್ಲಕ್ಷೃ ದುರ್ಘಟನೆಗೆ ಕಾರಣವಾಗಿದೆ ಎಂಬುದನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಘಟನಾ ಸ್ಥಳ ಹಾಗೂ ಮೃತದೇಹಗಳನ್ನಿಟ್ಟಿದ್ದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್ ತಿಳಿಸಿದರು. ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.