ಕುಂದಾಪುರ: ಕುಂದಾಪುರ-ಕಾರಾವರ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಅಲ್ಲಲ್ಲಿ ಅಸಮರ್ಪಕ ಕಾಮಗಾರಿ ನಡೆಸಿದ ಕಾರಣ ಹೆದ್ದಾರಿ ಇಕ್ಕೆಲಗಳಲ್ಲಿ ಮಳೆ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ.

ಶನಿವಾರ ಬೆಳಿಗ್ಗೆನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಸಂಗಮ್ ಬಳಿ ಇರುವ ಸಂತೆ ಮಾರ್ಕೇಟ್ ಬಳಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕುಂದಾಪುರದಲ್ಲಿ ಮಾಮೂಲಿಯಾಗಿ ಶನಿವಾರದಂದು ಸಂತೆ ನಡೆಯುತ್ತೆ. ಊರು ಪರವೂರುಗಳಿಂದ ಸಂತೆಗೆ ಖರೀದಿದಾರರು ಬಂದರೆ ರಾಜ್ಯದ ವಿವಿದೆಡೆಯಿಂದ ವರ್ತಕರು ಬರುತ್ತಾರೆ. ಇಂದು ಸಂತೆಗೆ ಆಗಮಿಸಿದ ಮಂದಿಗೆ ಹೆದ್ದಾರಿ ಬಳಿ ಮೊಣಕಾಲೆತ್ತರಕ್ಕೆ ನಿಂತಿದ್ದ ಮಳೆ ನೀರು ಸ್ವಾಗತ ಕೋರಿದೆ. ಸಂತೆಯೊಳಕ್ಕೆ ಪ್ರವೇಶಿಸಿದ ಮಂದಿಯೂ ಕೂಡ ರಾಡಿಯೆದ್ದ ಕೆಸರು ಗದ್ದೆಯಂತಾದ ವ್ಯವಸ್ಥೆಯಲ್ಲಿಯೇ ನಡೆದು ಸಾಗಬೇಕಾಯಿತು. ಇನ್ನು ಸಂತೆ ಮಾರ್ಕೇಟ್ ಬಳಿಯಿಂದ ಸುಮಾರು 200 ಮೀಟರ್ ಉದ್ದಕ್ಕೆ ಮೊಣಕಾಲೆತ್ತರ ನೀರು ನಿಂತ ಕಾರಣ ಪಾದಾಚಾರಿಗಳು ನಡೆದಾಡಲು ಅನಾನುಕೂಲವಾಯಿತು. ಅಲ್ಲದೇ ವಾಹನ ಸವಾರರು ಪರಾಡುವಂತಾಗಿತ್ತು.
ಇನ್ನು ಸ್ಥಳದಲ್ಲಿದ್ದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಈ ಅವ್ಯವಸ್ಥೆಯೇ ನಡುವೆಯೇ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು.
Comments are closed.