ಕರಾವಳಿ

ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ಷಡ್ಯಂತ್ರ : ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

Pinterest LinkedIn Tumblr

ಮಂಗಳೂರು, ಆಗಸ್ಟ್.31: ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ) ವನ್ನು ದುರುಪಯೋಗ ಮಾಡಲಾಗುತ್ತಿದೆ. ಅವರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ರಾಜಕೀಯ ದ್ವೇಷದಿಂದ ಈ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ಕಾನೂನು ಮೂಲಕವೇ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದ.ಕ. ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ 27 ಬ್ಯಾಂಕುಗಳ ವಿಲೀನದ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ವ್ಯವಸ್ಥೆ ದುರ್ಬಲವಾಗಿದೆ. ಜಿಡಿಪಿ ಬೆಳವಣಿಗೆ ದರ ಶೇ.5ರಷ್ಟು ಏರಿಕೆ ಕಂಡಿಂದೆ ಎನ್ನುತ್ತಾರೆ. ಕಳೆದ 6 ವರ್ಷಗಳಲ್ಲಿ ಇದೇ ಅತ್ಯಂತ ಕಡಿಮೆ ಅಂತಾನು ಅವರೇ ಹೇಳಿದ್ದಾರೆ. ಆದರೆ ನನ್ನ ಪ್ರಕಾರ ಇದು 5ಶೇ. ಇಲ್ಲ. ಇಲ್ಲವೇ 3.7 ಅಥವಾ 4 ಶೇ. ಆಗಿರಬೇಕು ಅಷ್ಟೇ ಎಂದು ಅಭಿಪ್ರಾಯಿಸಿದರು.

27 ಬ್ಯಾಂಕುಗಳನ್ನು ವಿಲೀನ ಮಾಡಿ ಅವುಗಳನ್ನು ಬಲಪಡಿಸುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ವಿಲೀನದಿಂದ ಬ್ಯಾಂಕುಗಳು ಬಲಗೊಳ್ಳುತ್ತವೆ ಎಂದು ನನಗೆ ಅನ್ನಿಸುತ್ತಿಲ್ಲ. ಸದ್ಯ ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳ ಮೇಲೆ ಕೇಂದ್ರದ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಅವರು ದೂರಿದರು.

ಬಳಿಕ ಸಿದ್ಧರಾಮಯ್ಯ ಅವರು ನೇರವಾಗಿ ಪಚ್ಚನಾಡಿ ತ್ಯಾಜ್ಯ ಹರಿದು ಸಂಕಷ್ಟಕ್ಕೀಡಾದ ಮಂದಾರ ಪ್ರದೇಶದ ಸಂತ್ರಸ್ತ ಜನತೆಯನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಟಿ,ಖಾದರ್, ಮಾಜಿ ಶಾಸಕ ಮೊಯಿದ್ದಿನ ಭಾವ, ಮಾಜಿ ಮೇಯರ್ ಭಾಸ್ಕರ್ ಮೊಯಿಲಿ ಸೇರಿದಂತೆ ಜಿಲ್ಲೆಯ ಹಲವು ಕಾಂಗ್ರೆಸ್‌ ಕಾರ್ಯಕರ್ತರು ಜೊತೆಯಲ್ಲಿ ಇದ್ದರು.

Comments are closed.