ಕರಾವಳಿ

ಯಡಮೊಗೆಯಲ್ಲಿ ಕರುಳ ಕುಡಿಯ ಕೊಂದು ಅಪಹರಣ ನಾಟಕವಾಡಿದ್ದ ಆರೋಪಿ ತಾಯಿಗೆ ಜಾಮೀನು

Pinterest LinkedIn Tumblr

ಉಡುಪಿ: ತನ್ನ ಕರುಳ ಕುಡಿಯನ್ನೇ ಕೊಂದು ಕುಬ್ಜಾ ನದಿಗೆ ತೇಲಿಬಿಟ್ಟು ಅದೊಂದು ಅಪಹರಣ ಎನ್ನುವಂತೆ ಪ್ರಹಸನ ಮಾಡಿದ್ದ ತಾಯಿಗೆ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ ಜೋಷಿ ಶರತ್ತುಬದ್ಧ ಜಾಮೀನು ನೀಡಿ ಮಂಗಳವಾರ ಆದೇಶ ನೀಡಿದ್ದಾರೆ.

(ಕೊಲೆಯಾದ ಸಾನ್ವಿಕಾ)

ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜುಲೈ 11 ರಂದು ಈ ಘಟನೆ ನಡೆದಿತ್ತು. ಒಂದು ವರ್ಷ ಮೂರು ತಿಂಗಳು ಪ್ರಾಯದ ಸಾನ್ವಿಕಾಳನ್ನು ಆಕೆಯ ಹೆತ್ತಮ್ಮ ರೇಖಾ ಹೊಳೆಯ ನೀರಿನಲ್ಲಿ ತೇಲಿಬಿಟ್ಟು ಕೊಲೆಗೈದ ಆರೋಪ ಹೊತ್ತಿದ್ದಳು.

(ಆರೋಪಿ ರೇಖಾ)

ಅಂದು ನಡೆದಿದ್ದೇನು
ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಯಡಮೊಗೆ ಕುಮ್ಟಿಬೇರು ಎನ್ನುವಲ್ಲಿ ಮಗುವೊಂದು ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಅಪಹರಣವಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಖುದ್ದು ಉಡುಪಿ ಎಸ್ಪಿ ನಿಶಾ ಜೇಮ್ಸ್ ಸಹಿತ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ವಿವಿಧ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಚುರುಕುಗೊಳಿಸಿದ್ದರು. ಆ ಊರಿನ ಮಂದಿಯೂ ಮಗುವಿನ ಹುಡುಕಾಟಕ್ಕೆ ತುಂಬಿ ಹರಿಯುವ ಹೊಳೆಯ ನೀರನ್ನು ಲೆಕ್ಕಿಸದೇ ಸತತ ಶ್ರಮ ಪಟ್ಟಿದ್ದರು. ಎಲರೂ ದುಃಖಿತರಾಗಿದ್ದರೆ ಪುಟಾಣಿ ಕಂದಮ್ಮನ ತಾಯಿ ರೇಖಾ ಮಾತ್ರ ಏನೂ ಆಗಿಲ್ಲ ಎನ್ನುವಂತಿದ್ದಳು. ಪೊಲೀಸರಿಗೆ ತನ್ನದೇ ಕಥೆ ಕಟ್ಟಿ ವಿವರಣೆ ನೀಡುತ್ತಿದ್ದಳು. ಮುಂಜಾನೆ ಅಪರಿಚಿತನೊಬ್ಬ ಮನೆಯೊಳಕ್ಕೆ ಬಂದು ಮಗುವನ್ನು ಕದ್ದು ಹೊಳೆಯ ಮೂಲಕವಾಗಿ ಸಾಗಿ ಮರೆಯಾಗಿಬಿಟ್ಟ ಎನ್ನುವ ಪುಂಕಾನುಪುಂಖದ ಕಥೆ ಅದಾಗಿತ್ತು. ಆದರೆ ಕೂಲಂಕುಷ ವಿಚಾರಣೆ ನಡೆಸಿದ ಎಸ್ಪಿ ನೇತೃತ್ವದ ಪೊಲೀಸರ ತಂಡಕ್ಕೆ ಅದಾಗಲೇ ಆಕೆಯ ತದ್ವಿರುದ್ಧ ಹೇಳಿಕೆ ಅನುಮಾನ ಮೂಡಿಸಿತ್ತು. ಆಕೆ ಬಗ್ಗೆ ನಿಗಾ ವಹಿಸಿದ ಪೊಲೀಸರು ಮಗುವಿನ ಪತ್ತೆಗೆ ಕಾರ್ಯೋನ್ಮುಖರಾಗಿದ್ದರು.

ಮರುದಿನ ಸಿಕ್ಕಿತು ಸಾನ್ವಿಕಾ ಶವ..
ಜು.11 ರಂದು ಬೆಳಿಗ್ಗೆ ಈ ಘಟನೆ ನಡೆದಿತ್ತು. ಅಂದು ಈಜುಪಟುಗಳು, ಅಗ್ನಿಶಾಮಕದಳ, ಪೊಲಿಸರು, ಸ್ಥಳಿಯರು ಮಗುವಿನ ಪತ್ತೆಗೆ ವಿವಿಧ ಆಯಾಮಗಳಲ್ಲಿ ಹುಡುಕಾಡಿದ್ದರು. ಆದರೆ ಮಾರನೆ ದಿನ ಮಗು ಸಾನ್ವಿಕಾಳ ಶವ ಕಾರೂರು ಎಂಬಲ್ಲಿನ ಕುಬ್ಜಾ ನದಿಯಲ್ಲಿ ಗಿಡವೊಂದರಲ್ಲಿ ಸಿಕ್ಕಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಅಲರ್ಟ್ ಆದ ಪೊಲೀಸರು..
ಈ ಬಗ್ಗೆ ಅಲರ್ಟ್ ಆದ ತನಿಖಾ ತಂಡದ ಅಧಿಕಾರಿ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಆರೋಪಿ ರೇಖಾ ಹಾಗೂ ಕೊಲೆಗೈಯಲು ಯತ್ನಿಸಿದ ರೇಖಾಳ ಐದು ವರ್ಷದ ಪುತ್ರನನ್ನು ವಿಚಾರಣೆ ನಡೆಸಿ ಪ್ರಕರಣದ ನಿಜಾಂಶ ತಿಳಿದು ಅಪಹರಣದ ಡ್ರಾಮಾ ಮಾಡಿದ ರೇಖಾಳನ್ನೇ ಆರೋಪಿ ಎಂದು ಕಾಣಿಸಿ ಆಕೆ ವಿರುದ್ಧ ಕೊಲೆ ಪ್ರಕರಣದಡಿ ಐಪಿಸಿ ಸೆಕ್ಷನ್ 302, ಕೊಲೆಯತ್ನ ಪ್ರಕರಣದಡಿ 307, ಆತ್ಮಹತ್ಯೆ ಯತ್ನ ಕೇಸಿನಡಿ 309 ಸೆಕ್ಷನ್ ದಾಖಲಿಸಿದ್ದರು.

ತಾಯಿಗೆ ಬಗ್ಗೆ ಆಕ್ರೋಷ..
ಎಳೆ ಕಂದಮ್ಮನ ಕೊಂದ ತಾಯಿ ರೇಖಾ ವಿಚಾರ ತಿಳಿಯುತ್ತಿದ್ದಂತೆಯೇ ಎಲ್ಲೆಡೆ ಆಕ್ರೋಷ ವ್ಯಕ್ತವಾಗಿತ್ತು. ಆಕೆಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್ ತೀವ್ರವಾಗಿ ವಿರೋಧವೂ ಮಾಡಿತ್ತು.

ಜಾಮೀನು ಸಿಕ್ಕಿದ್ದು ಹೇಗೆ?
ಆರೋಪಿ ರೇಖಾ ಬಾಣಂತನದ ಬಳಿಕ ಸ್ತ್ರೀಯರಲ್ಲಿ ಕಾಣಿಸುವ ಮಾನಸಿಕ ರೋಗವಾದ ಪ್ಯೂಪೇರಿಯಮ್(Puerperium) ಸಮಸ್ಯೆಯಿಂದ ಈ ಕೃತ್ಯ ಮಾಡಿದ ಬಗ್ಗೆ ಆರೋಪಿ ಪರ ಕುಂದಾಪುರದ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ವಾದ ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ರೇಖಾಳಿಗೆ ಶರ್ತಬದ್ಧ ಜಾಮೀನು ನೀಡಿ ಆದೇಶಿಸಿದ್ದಾರೆ. ಬೆಚ್ಚಿಬೀಳಿಸಿದ ಕೊಲೆ ಪ್ರಕರಣದಲ್ಲಿ ಇದೀಗಾ ಜಾಮೀನು ಲಭಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

ಈ ಸುದ್ದಿಗೆ ಸಂಬಂಧಿತ ವರದಿಗಳು-

ಹೆತ್ತಮ್ಮನ ಮಡಿಲಲ್ಲಿ ಮಲಗಿದ್ದ ಕಂದಮ್ಮನ ಅಪಹರಣ; ಸ್ಥಳದಲ್ಲಿ ಎಸ್ಪಿ ಮೊಕ್ಕಾಂ, ಡಿವೈಎಸ್ಪಿಯಿಂದ ತನಿಖೆ (Video)

ಯಡಮೊಗೆಯಲ್ಲಿ ಅಪಹರಣಕ್ಕೊಳಗಾಗಿತ್ತೆನ್ನಲಾದ ಮಗುವಿನ ಶವ ಪತ್ತೆ: ಮುಂದುವರಿದ ತನಿಖೆ

ಯಡಮೊಗೆ ಕುಮ್ಟಿಬೇರಿನಲ್ಲಿ ಕರುಳ ಕುಡಿಯನ್ನು ಕೈಯಾರೆ ಕೊಂದಳು ಕ್ರೂರಿ ತಾಯಿ

Comments are closed.