ಕರಾವಳಿ

ಹೆತ್ತಮ್ಮನ ಮಡಿಲಲ್ಲಿ ಮಲಗಿದ್ದ ಕಂದಮ್ಮನ ಅಪಹರಣ; ಸ್ಥಳದಲ್ಲಿ ಎಸ್ಪಿ ಮೊಕ್ಕಾಂ, ಡಿವೈಎಸ್ಪಿಯಿಂದ ತನಿಖೆ (Video)

Pinterest LinkedIn Tumblr

ಕುಂದಾಪುರ: ಪುಟಾಣಿ ಹೆಣ್ಣು ಮಗುವೊಂದನ್ನು ಅಪರಿಚಿತ ವ್ಯಕ್ತಿ ಅಪಹರಣ ಮಾಡಿದ ವಿಚಾರ ಸದ್ಯ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು ಮಗುವಿನ ಪೋಷಕರು ಪೊಲೀಸರಿಗೆ ನೀಡಿದ ದೂರಿನಂತೆ ಅಪಹರಣ ಪ್ರಕರಣ ದಾಖಲಾಗಿದೆ‌. ಗುರುವಾರ ಮುಂಜಾನೆ ಕುಂದಾಪುರ ತಾಲೂಕಿನ ಎಡಮೊಗೆಯ ಕುಮ್ಟಿಬೇರು ಎಂಬಲ್ಲಿ ಈ ಘಟನೆ ನಡೆದಿದೆ‌. ಇಲ್ಲಿನ ನಿವಾಸಿ ಸಂತೋಷ ನಾಯ್ಕ್, ರೇಖಾ ಅವರ ಒಂದು ವರ್ಷ ಮೂರು ತಿಂಗಳು ಪ್ರಾಯದ ಸಾನ್ವಿಕಾ ನಾಪತ್ತೆಯಾದ ಕಂದಮ್ಮ.

ಹೊಸಂಗಡಿ ಸಂಡೂರಿನ ಪವರ್ ಹೌಸ್’ನಲ್ಲಿ ಸಂತೋಷ್ ನಾಯ್ಕ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದು ಕೆಲವೊಮ್ಮೆ ರಾತ್ರಿ ಪಾಳಿ ಇರುವಾಗ ರೇಖಾ ಐದು ವರ್ಷ ಪ್ರಾಯದ ಗಂಡು ಮಗ ಮತ್ತು ಸಾನ್ವಿಕಾ ಹಾಗೂ ಸಂತೋಷ್ ತಾಯಿ ಮನೆಯಲ್ಲಿರುತ್ತಿದ್ದರು. ಗುರುವಾರ ರಾತ್ರಿ ಸಂತೋಷ್ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದು ಅವರ ತಾಯಿ ಮಗಳ ಮನೆಗೆ ನಾಟಿ ಕಾರ್ಯಕ್ಕೆ ತೆರಳಿದ್ದು ರೇಖಾ ಮತ್ತು ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದರು.

ಮಗುವಿನ ತಾಯಿ ಹೇಳೋದೆನು?
ಗುರುವಾರ ಮುಂಜಾನೆ 4-5 ಗಂಟೆ ವೇಳೆ ಹಿಂಬಾಗಿಲಿನಿಂದ ಮನೆ ಪ್ರವೇಶಿಸಿದ ಮುಸುಕುಧಾರಿ ವ್ಯಕ್ತಿ ಯೋರ್ವ ತಾಯಿ ಬಳಿ ಮಲಗಿದ ಮಗುವನ್ನು ಹೊತ್ತೊಯ್ದಿದ್ದು ಮಗುವಿನ ಅಳು ಹಾಗೂ ಬಾಗಿಲ ಶಬ್ದ ಕೇಳಿಸಿಕೊಂಡ ರೇಖಾ ಆಗಂತುಕನ ಹಿಂದೆ ಇನ್ನೋರ್ವ ಮಗನೊಂದಿಗೆ ಹಿಂಬಾಲಿಸಿದ್ದು ಮಗು ಕಳವು ಮಾಡಿದ ಅಪರಿಚಿತ ಇವರ ಮನೆ ಸಮೀಪದಲ್ಲಿನ ಕುಬ್ಜಾ ನದಿಯಲ್ಲಿಳಿದಿದ್ದಾನೆ. ಆದರೂ ತಾಯಿ ಮಗ ಇಬ್ಬರೂ ಮಗುವನ್ನು ರಕ್ಷಿಸಲು ನದಿಗಿಳಿದಿದ್ದು ತುಂಬಿ ಹರಿವ ನದಿಯಲ್ಲಿ ಕೊಚ್ಚಿಹೋಗುವ ಸ್ಥಿತಿಯಲ್ಲಿದ್ದು ಅವರ ಕೂಗಾಟ ಕೇಳಿ ಸ್ಥಳೀಯರು ಬಂದು ತಾಯಿ ಮತ್ತು ಹಿರಿಯ ಮಗನನ್ನು ರಕ್ಷಿಸಿದ್ದಾರೆ‌. ಆದರೆ ಸಾನ್ವಿಕಾಳನ್ನು‌ ಮಾತ್ರ ಆಗಂತುಕ ನದಿಯಲ್ಲಿ ಸಾಗಿ ಕರೆದೊಯ್ದ. ಇದು ನಮ್ಮ ಮನೆ ಬಗ್ಗೆ ತಿಳಿದಿರೋರು ಮಾಡಿದ್ದಾರೆ ಅನ್ನೋದು ಮಗುವಿನ ತಂದೆ ತಾಯಿ ತಿಳಿಸುವ ಮಾಹಿತಿ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಪ್ರಕರಣವು ವಿವಿಧ ಕೋನಗಳಲ್ಲಿ ಸ್ಥಳೀಯವಾಗಿ ಚರ್ಚೆಗೀಡಾಗುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಇದೊಂದು ಗಂಬೀರ ಘಟನೆ ಎನ್ನುವುದಕ್ಕೆ ಸಾಕ್ಷಿಯಾಗಿದೆ‌. ಮಗುವಿನ ನಿಗೂಢ ನಾಪತ್ತೆ ಪ್ರಕರಣ ಪೊಲೀಸರ ಸಮಗ್ರ ತನಿಖೆಯಿಂದಷ್ಟೆ ಬಯಲಾಗಬೇಕಿದೆ. ಮಗು ಬೂದು ಬಣ್ಣದಬಟ್ಟೆ ಧರಿಸಿದ್ದು ಮಗುವಿನ ಬಗ್ಗೆ ಯಾವುದೇ ಸುಳಿವಿದ್ದರೂ ಪೊಲೀಸ್ ಇಲಾಖೆ ಸಂಪರ್ಕಿಸುವಂತೆ ಪೊಲೀಸ್ ವರಿಷ್ಟಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿಪಿಐ ಮಂಜಪ್ಪ ಡಿ.ಆರ್., ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಪ್ರಕಾಶ್, ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್‌, ಡಿಸಿಐಬಿ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ವಿವಿಧ ಆಯಾಮದ ತನಿಖೆ ಹಿನ್ನೆಲೆ ಶ್ವಾನದಳ, ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿದ್ದರು‌. ಸಿದ್ದಾಪುರ ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ ಮೊದಲಾದವರು ಇದ್ದರು.

‘ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮೊಗೆ ಕುಮ್ಟಿಬೇರು ಎಂಬಲ್ಲಿ ಪುಟಾಣಿ ಮಗು ನಾಪತ್ತೆಯಾದ ಬಗ್ಗೆ ದೂರು ಬಂದಿದ್ದು ಈ ಬಗ್ಗೆ ಮಗುವಿನ ತಾಯಿಯ ಸಮಗ್ರ ವಿಚಾರಣೆ ಮಾಡಲಾಗಿದೆ‌. ತಾಯಿ ಹೇಳಿಕೆಯಂತೆ ಅಪರಿಚಿತ ವ್ಯಕ್ತಿ ಮಗುವನ್ನು ಅಪಹರಣ ಮಾಡಿ ಹೊಳೆಯಲ್ಲಿ ಇಳಿದು ಓಡಿಹೋದ ಬಗ್ಗೆ ತಿಳಿಸಿದ್ದು ಇನ್ನೋರ ಮಗ ಮತ್ತು ಆಕೆಯನ್ನು ಸ್ಥಳೀಯರು ರಕ್ಷಿಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದು ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇದೊಂದು ಗಂಭೀರ ಪ್ರಕರಣವಾದ್ದರಿಂದ ಕುಂದಾಪುರ ಡಿವೈಎಸ್ಪಿಗೆ ತನಿಖಾಧಿಕಾರಿಯಾಗಿ ಜವಬ್ದಾರಿ ನೀಡಲಾಗುತ್ತದೆ. ಅಪಹರಣದ ಬಗ್ಗೆ ಹೇಳಿರುವ ಕಾರಣ ಈ ಆಯಾಮದಲ್ಲಿಯೂ ತನಿಖೆ ಮಾಡಲಾಗುತ್ತದೆ. ಶ್ವಾನದಳ ಹಾಗೂ ಅಗ್ನಿಶಾಮಕ ದಳ ಕರೆಯಿಸಿ ಪರಿಶೀಲನೆ ನಡೆಸಲಾಗಿದೆ. ಉಡುಪಿ ಡಿಸಿಐಬಿ ಪೊಲೀಸರು ಹಾಗೂ ಕುಂದಾಪುರ ಸಿಪಿಐ ನೇತೃತ್ವದ ತಂಡ ವಿಚಾರಣೆ ಕೈಗೆತ್ತಿಕೊಂಡಿದೆ. ಮಗುವಿನ ತಾಯಿ ನೀಡಿದ ದೂರಿನಂತೆ ಅಪಹರಣ ಪ್ರಕರಣ ದಾಖಲಿಸಿ ಈ ನಿಟ್ಟಿನಲ್ಲಿಯೂ ತನಿಖೆ ಸಾಗಲಿದೆ. ಮಗುವಿನ ಪತ್ತೆ ಬಗ್ಗೆ ಸಾರ್ವಜನಿಕರ ಸಹಕಾರವೂ ಬೇಕಿದ್ದು ಯಾವುದೇ ಸುಳಿವಿದ್ದರೂ ಪೊಲೀಸ್ ಇಲಾಖೆ ಗಮನಕ್ಕೆ ತರಬಹುದು’.
– ನಿಶಾ ಜೇಮ್ಸ್, ಉಡುಪಿ ಎಸ್ಪಿ

(ವರದಿ- ಯೋಗೀಶ್ ಕುಂಭಾಸಿ)

Comments are closed.