
ಬೆಂಗಳೂರು: ಪ್ರಖರ ವಾಗ್ಮಿ, ಹಿರಿಯ ರಾಜಕಾರಣಿ, ಸಾಮಾಜಿಕ ಚಿಂತಕ-ಹೋರಾಟಗಾರ, ರಾಜ್ಯ ಉಚ್ಚ ನ್ಯಾಯಾಲಯದ ಖ್ಯಾತ ವಕೀಲರು ಆಗಿದ್ದ ಎ ಕೆ ಸುಬ್ಬಯ್ಯ ಅವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂದು ಸುದ್ದಿ ಬಂದಿದೆ. 85 ವರ್ಷದ ಎ.ಕೆ. ಸುಬ್ಬಯ್ಯ ಅವರು ಕೆಲವಾರು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ಈಡಾಗಿದ್ದರು. ನಾಲ್ಕೈದು ಬಾರಿ ಅವರಿಗೆ ಡಯಾಲಿಸಿಸ್ ಕೂಡ ಮಾಡಲಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದ್ದ ಅವರು ನಿನ್ನೆ ಪ್ರಜ್ಞೆ ಕಳೆದುಕೊಂಡಿದ್ದರೆಂದು ಹೇಳಲಾಗುತ್ತಿದೆ. ಹಾಗೆಯೇ, ತಮಗೆ ಸಹಜ ಸಾವು ಬರಬೇಕು. ಔಷಧ, ಲೈಫ್ ಸಪೋರ್ಟ್ನಿಂದ ಕಾಪಾಡುವ ಪ್ರಯತ್ನ ಮಾಡಬಾರದು ಎಂಬುದು ಅವರ ಇಚ್ಛೆಯಾಗಿತ್ತೆನ್ನಲಾಗಿದೆ.
ಕೊಡಗಿನವರಾದ ಅಜ್ಜೀಕುಟ್ಟಿರ ಕರಿಯಪ್ಪ ಸುಬ್ಬಯ್ಯ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ನೇರ, ದಿಟ್ಟ, ನಿಷ್ಠುರ ಮಾತುಗಳಿಗೆ ಹೆಸರಾಗಿದ್ದ ಎ.ಕೆ. ಸುಬ್ಬಯ್ಯ ಒಂದು ಕಾಲದಲ್ಲಿ ಸಂಘ ಪರಿವಾರದ ನಿಷ್ಠಾವಂತ ಮುಖಂಡರಾಗಿದ್ದರು. ಆದರೆ, ಮುಂದಿನ ದಿನಗಳಲ್ಲಿ ಆರೆಸ್ಸೆಸ್ ವಿಚಾರಧಾರೆ ವಿರುದ್ಧವೇ ಸಿಡಿದೆದ್ದರು. ಆರೆಸ್ಸೆಸ್ ವಿರುದ್ಧ ನೀಡುತ್ತಿದ್ದ ಹೇಳಿಕೆಗಳಿಂದಲೇ ಅವರು ಹೆಚ್ಚು ಖ್ಯಾತಿ ಪಡೆದಿದ್ದರು. ಅನೇಕ ವಿವಾದಾತ್ಮಕ ಹೇಳಿಕೆಗಳನ್ನೂ ನೀಡುತ್ತಿದ್ದರು. ಈ ಹೇಳಿಕೆಗಳ ಕಾರಣದಿಂದಲೇ ಕಾಂಗ್ರೆಸ್ನಂತಹ ಪಕ್ಷ ಕೂಡ ಅವರಿಂದ ದೂರ ಇರತೊಡಗಿತ್ತು.
ಎಂಬತ್ತರ ದಶಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಎ.ಕೆ. ಸುಬ್ಬಯ್ಯ ಕೂಡ ಹೌದು. ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿ ಅವರು ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಛಳಿ ಬಿಡಿಸಿದ್ದರು. ಅವರ ನಾಯಕತ್ವದಲ್ಲೇ 1983ರ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದಲ್ಲಿ 12ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿತ್ತು.
ವಿಪರ್ಯಾಸವೆಂದರೆ, ಅದಾದ ಬಳಿಕ ಎ.ಕೆ. ಸುಬ್ಬಯ್ಯ ಅವರನ್ನು ಪಕ್ಷವು ನಿರ್ಲಕ್ಷಿಸತೊಡಗಿತು. ಬಿಜೆಪಿಯನ್ನು ತೊರೆದ ಎ.ಕೆ. ಸುಬ್ಬಯ್ಯ ನಂತರ ದಿನಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ಹೇಳಿಕೆಗಳ ಮೂಲಕ ಖ್ಯಾತರಾಗಿ ಉಳಿದಿದ್ದರು.
ಕರ್ನಾಟಕ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಗಳಲ್ಲಿ ಒಬ್ಬರೆನಿಸಿರುವ ಅವರು ಮೌಢ್ಯ ವಿರೋಧಿಗಳೂ ಹೌದು. ಅನೇಕ ಮೌಢ್ಯ ವಿರೋಧಿ ಹೋರಾಟಗಳಲ್ಲೂ ಅವರು ತೊಡಗಿಸಿಕೊಂಡಿದ್ದರು.
Comments are closed.