ಕರಾವಳಿ

ಪಡುಬಿದ್ರಿ; ಯುಪಿಸಿಎಲ್ ಕಾರ್ಮಿಕನ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 5 ಸಾವಿರ ದಂಡ

Pinterest LinkedIn Tumblr

ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪಡುಬಿದ್ರಿಯ ಎಲ್ಲೂರಿನಲ್ಲಿ ನಡೆದ ಯುಪಿಸಿಎಲ್ ಕಾರ್ಮಿಕನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲಿನ ದೋಷಾರೋಪಣೆಗಳು ಸಾಭೀತಾಗಿದ್ದು ಅಪರಾಧಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ, ಐದು ಸಾವಿರ ದಂಡ ವಿಧಿಸಿ ಉಡುಪಿ ಜಿಲ್ಲಾ, ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಷಿಯವರು ಶುಕ್ರವಾರದಂದು ಆದೇಶಿಸಿದ್ದಾರೆ.

ಬೆಳಗಾವಿ ಮುರುಗೋಡು ಠಾಣೆ ವ್ಯಾಪ್ತಿಯ ಬಸಪ್ಪ ದುರ್ಗಪ್ಪ ಮಸ್ತಮರಡಿ (46) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ.

ಅಂದು ಆಗಿದ್ದೇನು?
2013 ಆ. 25 ನಡೆದ ಕೊಲೆ ಇದಾಗಿತ್ತು. ಕೂಲಿ ಕೆಲಸಕ್ಕೆಂದು ಬಂದಿದ್ದ ಕೊಪ್ಪಳ ಮೂಲದ ಶರಣಪ್ಪ ಎಂಬಾತನನ್ನು ಬಸಪ್ಪ ದುರ್ಗಪ್ಪ ಮಸ್ತಮರಡಿ ಹಾಗೂ ಇನ್ನೋರ್ವ ಆರೋಪಿ ಹಣಕಾಸು ತಗಾದೆ ಹಾಗೂ ಅನ್ನ ಮಾಡುವ ವಿಚಾರದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯ ಜಾಡು ಹಿಡಿಯಲು ಅಂದಿನ ಪ್ರೊಬೆಷನರಿ ಡಿವೈಎಸ್‌ಪಿ ಸವಿತಾ ಹೂಗಾರ್ ಮತ್ತವರ ವಿಶೇಷ ತಂಡವು ಸಿಪಿಐ ಸುನೀಲ್ ವೈ. ನಾಯ್ಕ್ ಮುಂದಾಳತ್ವದಲ್ಲಿ ಆರೋಪಿ ಪತ್ತೆಗೆ ಬಲೆ ಬೀಸಿತ್ತು. ಕೂಲಂಕುಷ ತನಿಖೆ ಹಿನ್ನೆಲೆ ಆರೋಪಿಯ ಹೆಂಡತಿ ದಾರವಾಡದ ಪ್ರಮುಖ ದೇವಸ್ಥಾನವೊಂದರಲ್ಲಿ ಕೆಲಸ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ಬಗ್ಗೆ ನಿಗಾ ಇಟ್ಟು ಸೆಪ್ಟೆಂಬರ್ 11ರಂದು ಆರೋಪಿಯನ್ನು ದಾರಾವಾಡದಲ್ಲಿ ಬಂಧಿಸಿ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದಾದ ಕೆಲವೇ ದಿನದಲ್ಲಿ ಇನ್ನೋರ್ವವನ್ನು ಬಂಧಿಸಿದ್ದು ಆತ ನ್ಯಾಯಾಂಗ ಬಂಧನದಲ್ಲಿರುವಾಗಲೇ ಸತ್ತಿದ್ದ. ಇನ್ನು ಆರೋಪಿ ಬಸಪ್ಪ ದುರ್ಗಪ್ಪ ಮಸ್ತಮರಡಿ ಅಂದಾಜು ಎರಡು ವರ್ಷಗಳ ಕಾಲ ಜೈಲು ವಾಸದಲ್ಲಿದ್ದು ಬಳಿಕ ಜಾಮೀನು ಪಡೆದಿದ್ದ. ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಕಾಪು ಸಿಪಿಐ ಸುನೀಲ್ ವೈ. ನಾಯ್ಕ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು 20 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.