ಕರಾವಳಿ

ಬೈಂದೂರು ಕುದ್ರುಕೋಡ್ ಐ‌ಆರ್‌ಬಿ ಸಮಸ್ಯೆ ಪರಿಹಾರಕ್ಕೆ 10 ದಿನ ಗಡುವು ನೀಡಿದ ಶಾಸಕ ಬಿ‌ಎಂ ಸುಕುಮಾರ್ ಶೆಟ್ಟಿ

Pinterest LinkedIn Tumblr

ಕುಂದಾಪುರ: ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರುಕೋಡ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಗುತ್ತಿಗೆ ಕಂಪೆನಿಯಾದ ಐ.ಆರ್.ಬಿ.ಗೆ ಸಂಬಂದಪಟ್ಟ ಪ್ಲ್ಯಾಂಟೇಶನ್‌ನಿಂದ ಬರುತ್ತಿರುವ ತ್ಯಾಜ್ಯ ಹಾಗೂ ಕೃಷರ್ ದೂಳು ಮಿಶ್ರಿತ ನೀರಿನಿಂದ ಸಾರ್ವಜನಿಕರಿಗಾಗುತ್ತಿರುವ ಅನಾರೋಗ್ಯ ಹಾಗೂ ಕೃಷಿಗೆ ಆಗುತ್ತಿರುವ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವಿಸ್ತ್ರತ ವರದಿ ಪ್ರಕಟವಾದ ಹಿನ್ನೆಲೆ ಶನಿವಾರ ಮಧ್ಯಾಹ್ನ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಕುದ್ರುಕೋಡ್‌ನಲ್ಲಿರುವ ಘಟಕಕ್ಕೆ ಭೇಟಿ ನೀಡಿದರು.

ಈ ವೇಳೆ ಸಾರ್ವಜನಿಕರು ಜಮಾಯಿಸಿ, ಐ.ಆರ್.ಬಿ. ಪ್ಲ್ಯಾಂಟೇಶನ್ ಆದ ಬಳಿಕ ಸ್ಥಳೀಯ ಜನರು ಆರೋಗ್ಯ, ನೆಮ್ಮದಿ ಕಳೆದುಕೊಂಡಿದ್ದಾರೆ. ಇಲ್ಲಿ ನಡೆಸಲಾದ ಸ್ಫೋಟದಿಂದ ಅನೇಕ ಮನೆಗಳು ಬಿರುಕು ಬಿಟ್ಟು ಅಪಾರ ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದ ಕಲುಷಿತ ನೀರು ಬೇಸಾಯದ ಭೂಮಿಗೆ ನುಗ್ಗಿ ಕೃಷಿ ಇಳುವರಿ ಕುಸಿದಿದೆ. ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮನವಿ ನೀಡಿದರೂ ಯಾರೂಕೂಡ ಗಮನ ಹರಿಸಿಲ್ಲ. ಸ್ಥಳ ಪರಿಶೀಲನೆಯನ್ನೂ ನಡೆಸದ ಅಧಿಕಾರಿಗಳು ಇಲ್ಲಿನ ವ್ಯವಸ್ಥೆ ಸರಿಯಿದೆಯೆಂದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಬೇಜವಬ್ದಾರಿ ಪ್ರದರ್ಶಿಸಿದ್ದಾರೆ. ಶೀಘ್ರವೇ ಇಲ್ಲಿನ ಸಮಸ್ಯೆಗೆ ಮುಕ್ತಿ ಕೊಡಿಸಿ ಎಂದು ಶಾಸಕರ ಬಳಿ ಒತ್ತಾಯಿಸಿದರು.

ಸ್ಥಳೀಯರ ಮನವಿ ಆಲಿಸಿದ ಶಾಸಕರು ಸ್ಥಳದಲ್ಲಿಯೇ ಐ.ಆರ್.ಬಿ. ಇಂಜಿನಿಯರ್ ಯೋಗೇಂದ್ರಪ್ಪ ಅವರಿಗೆ ಕರೆ ಮಾಡಿ ತರಾಟೆಗೆತ್ತಿಕೊಂಡರು. ಘಟಕದ ಸುತ್ತಲೂ ದೂಳು ಹೋಗದಂತೆ ಇರುವ ಪರದೆ ಸರಿಪಡಿಸಬೇಕು. ಅಭಿವ್ರದ್ಧಿಯಾಗಬೇಕು ನಿಜ ಆದರೆ ಬಡವರು ಸಮಸ್ಯೆಮುಕ್ತವಾಗಿ ಬದುಕುವಂತಿರಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಣೆಯಾಗಬೇಕು. ಇಲ್ಲಿನ ಎಲ್ಲಾ ಸಮಸ್ಯೆ ನಿವಾರಿಸಲು ಹತ್ತು ದಿನ ಗಡುವು ನೀಡುತ್ತಿದ್ದು ಸರಿಪಡಿಸದಿದ್ದಲ್ಲಿ ಘಟಕದಲ್ಲಿ ಕುಳಿತು ಪ್ರತಿಭಟಿಸುವೆ ಎಂದು ತಾಕೀತು ಮಾಡಿದರು.

ಮನೆ ಬಿರುಕು ಬಿಟ್ಟಿದ್ದು ಇದಕ್ಕೆ ಸೂಕ್ತ ಪರಿಹಾರ ಕೊಡಿಸಿ ಎಂಬ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಕರೆ ಮಾಡಿದ್ದು ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಗೆ ವರದಿ ನೀಡುವಂತೆ ಸೂಚಿಸಿದರು.

ಇದನ್ನೂ ಓದಿರಿ: 

ಬೈಂದೂರು ಕುದ್ರುಕೋಡಲ್ಲಿ ಅಸ್ತಮಾ, ಚರ್ಮರೋಗ ಭೀತಿ-ಇದು ಐ.ಆರ್.ಬಿ. ಅವಾಂತರ!

Comments are closed.