ಕರಾವಳಿ

ಬೈಂದೂರು ಕುದ್ರುಕೋಡಲ್ಲಿ ಅಸ್ತಮಾ, ಚರ್ಮರೋಗ ಭೀತಿ-ಇದು ಐ.ಆರ್.ಬಿ. ಅವಾಂತರ!

Pinterest LinkedIn Tumblr

ಕುಂದಾಪುರ: ಕಳೆದ ಆರು ವರ್ಷದ ಹಿಂದೆ ಆ ಊರಿನ ಮಂದಿ ನೆಮ್ಮದಿ ಬದುಕು ಸಾಗಿಸುತ್ತಿದ್ದರು. ಅದ್ಯಾವಾಗ ಅಭಿವ್ರದ್ಧಿ ನೆಪದಲ್ಲಿ ಆಭಾಗದಲ್ಲೊಂದು ಫ್ಲ್ಯಾಂಟೇಶನ್ ಮಾಡಿದ್ರೋ ಅಲ್ಲಿಗೆ ಜನರ ನೆಮ್ಮದಿಗೆ ಕೊಡಲಿಯೇಟು ಬಿದ್ದಿದೆ. ಅಷ್ಟಕ್ಕೂ ಆ ಊರು ಯಾವುದು? ಅಲ್ಲಿನ ಸಮಸ್ಯೆಯೇನು? ಅದಕ್ಕೆ ಪರಿಹಾರ ಸಿಗುತ್ತಿಲ್ಲವೇಕೆ ಅನ್ನೊದಕ್ಕೆ ಈ ಸ್ಟೋರಿ ನೋಡಿ.

ಅರವತ್ತು ಎಪ್ಪತ್ತು ಸಾವಿರ ನೆಲಗಡಲೆ ಇಳುವರಿ ಹದಿನೈದು ಇಪ್ಪತ್ತು ಸಾವಿರಕ್ಕೆ ಇಳಿಕೆ. ಒಂದೇ ಮನೆಯ ಎಲ್ಲಾ ಸದಸ್ಯರಿಗೂ ಅನಾರೋಗ್ಯ. ಇಬ್ಬರಿಗೆ ಅಸ್ತಮಾ ಬಾಧೆ. ಮತ್ತಷ್ಟು ಮಂದಿಗೆ ಚರ್ಮರೋಗ ಭೀತಿ. ಬಾಳೆ ಅಡಕೆ ಶಿಲೆಕಲ್ಲು ಧೂಳಿಗೆ ನೆಲಕಚ್ಚುತ್ತಿದೆ. ತೋಡು, ಹಳ್ಳಗಳಲ್ಲಿ ನೀರಿನ ಜೊತೆ ಕ್ರಷರ್ ಧೂಳು, ತೋಟಗಳಲ್ಲಿ ಡಾಮರ್, ಆಯಿಲ್ ತ್ಯಾಜ್ಯ ರಾಶಿ! – ಬೈಂದೂರು ತಾಲೂಕು ನಾವುಂದ ಗ್ರಾಮ ಪಂಚಾಯಿತಿ ಕುದ್ರುಕೋಡು ಎಂಬ ಪುಟ್ಟ ಊರು ಬದಲಾದ ಪರಿಯಿದು. ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಕುದ್ರುಕೋಡಲ್ಲಿ ನಿರ್ಮಿಸಲಾದ ಬೃಹತ್ ಮಿಕ್ಸಿಂಗ್ ಪ್ಲಾಂಟೇಶನ್ ಜನರ ನೆಮ್ಮದಿ, ಬದುಕು, ನೆಲ-ಜಲ ಸಂಪತ್ತಿನ ಜೊತೆ ಆರೋಗ್ಯ ಭಾಗ್ಯ ಕೂಡಾ ಕಿತ್ತುಕೊಂಡಿದೆ.

ಪರಿಸರದ ಜನ ಪ್ರತಿಭಟನೆ ನಡೆಸಿದರು, ಪ್ರಧಾನ ಮಂತ್ರಿ ಕಚೇರಿ ತನಕ ದೂರು ನೀಡಿದರು. ಪ್ರಧಾನ ಮಂತ್ರಿಕಚೇರಿ ಸ್ಪಂದಿಸಿದರೂ ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೂಡಾ ನೀಡದೆ, ಪ್ಲಾಂಟೇಶನ್ ಮಾಲೀಕರ ಬಳಿ ಮಾತನಾಡಿ, ಎಲ್ಲವೂ ಸರಿಯಿದೆ ಎಂದು ತಿಪ್ಪೆ ಸಾರಿಸುವ ಮೂಲಕ ಜನಸಾಮಾನ್ಯರ, ಅಸಹಾಯಕರ ಕೂಗಿಗೆ ಕಿಮ್ಮತ್ತು ನೀಡಿಲ್ಲ. ಪ್ಲಾಂಟೇಶನ್ ಎದುರಿಗೆ ಇರುವ ಮನೆಯ ಎಲ್ಲಾ ಮಂದಿಗೂ ಆರೋಗ್ಯ ಕೈಕೊಟ್ಟಿದೆ. ಹಿರಿಯ ಮಹಿಳೆ ಅಸ್ತಮಾದಿಂದ ಬಳಲುತ್ತಿದ್ದಾರೆ. ಆಸುಪಾಸಿನ ಮನೆ ಮಂದಿಗೆ ವಾಂತಿ, ಬೇಧಿಬಾಧೆ. ಅಸ್ತಮಾದಿಂದ ಬಳಲುತ್ತಿರುವ ಮಹಿಳೆಯರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧೂಳಿಂದ ದೂರ ಇರುವಂತೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-66 ವಿಸ್ತರಣೆ ಹಿನ್ನೆಲೆಯಲ್ಲಿ ಕುದ್ರುಕೋಡು ಜನ ವಸತಿ ಪ್ರದೇಶದಲ್ಲಿ ಸುಮಾರು 7ಎಕ್ರೆ ಪರದೇಶದಲ್ಲಿ ಮಿಕ್ಸಿಂಗ್ ಪ್ಲಾಂಟೇಶನ್ ತೆರೆದಿದ್ದು, ಪ್ಲಾಂಟೇಶನ್ ಮಾಡಲು ನಾವುಂದ ಗ್ರಾಮ ಪಂಚಾಯಿತಿ ಕೆಲವೊಂದು ನಿಯಮ ಹಾಕಿ 2014ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2017, ಜೂ.17ರ ತನಕ ಪರವಾನಿಗೆ ನೀಡಿದೆ. ಪ್ರಸಕ್ತ ಪರವಾನಿಗೆಯೇ ಇಲ್ಲದೆ ಪ್ಲಾಂಟೇಶನ್ ನಡೆಯುತ್ತಿದೆ. ಪ್ಲಾಂಟೇಶನ್ ರಸ್ತೆ ಅಗಲೀಕರಣ ಹಾಗೂ ಉನ್ನತೀ ಕರಣಕ್ಕಾಗಿ ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ, ಆಸ್ತಿಪಾಸ್ತಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗಬಾರದು. ವಾಹನದ ವೇಗಮಿತಿಯಲ್ಲಿ ಚಲಿಸಬೇಕು. ಅವಶ್ಯಕತೆ ಇದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರಿದಿಂದ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎನ್ನುವ ನಿಯಮವಿದ್ದು ಯಾವುದೂ ಪಾಲನೆ ಮಾತ್ರ ಆಗುತ್ತಿಲ್ಲ.

ರಸ್ತೆ ನಿರ್ಮಾಣಕ್ಕಾಗಿ ಡಾಮರ್ ಮಿಕ್ಸ್ ಕ್ರಷರ್ ಹುಡಿ ಎಲ್ಲವೂ ಪ್ಲಾಂಟೇಶನ್‌ನಲ್ಲಿ ನಡೆಯುತ್ತದೆ. ಪ್ರತಿದಿನ ನೂರಾರು ವಾಹನ ಕೂಡಾ ಇಲ್ಲಿಂದ ಓಡಾಡುತ್ತವೆ. ಪ್ಲಾಂಟೇಶನ್ ಇರುವ ಪರಿಸರದ 140ಕ್ಕೂ ಮಿಕ್ಕ ಮನೆಗಳಿಗೆ ಪ್ಲಾಂಟೇಶನ್ ಕಬಂಧಬಾಹು ಪರಿಣಾಮವಿದೆ. ಪ್ಲಾಂಟೇಶನ್ ಒಳಗೆ ದೊಡ್ಡ ದೊಡ್ಡ ಶಿಲೆಕಲ್ಲು ಬಂಡೆ ಒಡೆಯುವದರಿಂದ ಮನೆ ಗೋಡೆಗಳು ಬಿರುಕು ಬಿಟ್ಟಿದೆ. ನೆಲಗಡಲೆ ಹೂವಿನ ಮೇಲೆ ಕ್ರಷರ್ ಧೂಳು ಕೂರುವುದರಿಂದ ಬೆಳೆ ನೆಲ ಕಚ್ಚಿದೆ. ಪ್ಲಾಂಟೇಶನ್ ತ್ಯಾಜ್ಯಗಳ ಸಂಸ್ಕರಿಸದೆ, ಆಯಿಲ್ ಇನ್ನಿತರ ಪದಾರ್ಥ ಹೊರ ಬಿಡುವುದರಿಂದ ಕುಡಿಯುವ ನೀರು ಕಲುಶಿತಗೊಂಡು ಅತಿಸಾರಕ್ಕೆ ಒಳಗಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದಾರೆ.

ಒಟ್ಟಾರೆ ಡಿಸಿ, ಎಸಿ ಸಹಿತ ವಿವಿಧ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇಲಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಈ ಪ್ಲಾಂಟೇಶನ್ ಊರಿನ ನೆಮ್ಮದಿಯನ್ನೇ ಆಪೋಶನ ಮಾಡುತ್ತಿರುವುದು ಮಾತ್ರ ಸುಳ್ಳಲ್ಲ.

(ವರದಿ- ಯೋಗೀಶ್ ಕುಂಭಾಸಿ)

Comments are closed.