ಕರಾವಳಿ

ಸರ್ವ ರೋಗಕ್ಕೆ ಮದ್ದು ಅಗಿರುವ ಹಾಳೆ ಕೆತ್ತೆ ಕಷಾಯ ವಿತರಣೆ ಶ್ಲಾಘನೀಯ : ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ.

Pinterest LinkedIn Tumblr

ಮಂಗಳೂರು : ಆಟಿ ತಿಂಗಳಿನ ಅಮಾವಾಸ್ಯೆಯಂದು ಕುಡಿಯುವ ಹಾಳೆ ಕೆತ್ತೆ ಕಷಾಯವು ಸರ್ವ ರೋಗಕ್ಕೆ ಮದ್ದು, ಅಂತಹ ಹಾಳೆ ಕೆತ್ತೆ ಕಷಾಯವನ್ನು ಮತ್ತು ಮೆಂತೆ ಗಂಜಿಯನ್ನು ಮಂಗಳೂರಿನ ನಗರವಾಸಿಗಳಿಗೆ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಮಂದಿಗೆ ಉಚಿತ ವಾಗಿ ವಿತರಿಸಿರುವ ಕಾರ್ಯಕ್ರಮ ನಿಜವಾಗಲೂ ಶ್ಲಾಘನೀಯ ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಹರ್ಷ ಹೇಳಿದರು.

ಅವರು ತುಳುವೆರೆ ಆಯನ ಕೂಟ ಕುಡ್ಲ ಮತ್ತು ಹೋಟೆಲ್ ಡಿಂಕಿ ಡೈನ್ ಸಾರಥ್ಯದಲ್ಲಿ ನಡೆದ ಆಟಿ ಅಮವಾಸ್ಯೆದ ಮರ್ದ್ ಗಂಜಿ ಪಟ್ಟುನ ಲೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸುಸಂದರ್ಭದಲ್ಲಿ ಜಾನಪದ ವಿದ್ವಾಂಸರಾದ ದಯಾನಂದ ಕತ್ತಲ್ಸಾರ್ ಬರೆದಿರುವ ಆಟಿ ತಿಂಗಳಿನ ಸಮಗ್ರ ಮಾಹಿತಿಯನ್ನು ನೀಡುವ ‘ಆಟಿ’ ಎಂಬ ಪುಸ್ತಕದ ಲೋಕಾರ್ಪಣೆ ಯಾದದ್ದು ಸಂದರ್ಭೋಚಿತವಾಗಿದೆ ಎಂದು ಅವರು ಶ್ಲಾಘಿಸಿದರು.

ಶಂಕರ್ ವಿಠಲ್ ಮೋಟರ್ಸ್ ನ ಡಾ. ಆರೂರು ಪ್ರಸಾದ್ ರಾವ್, ಉದ್ಯಮಿ ಪುರುಷೋತ್ತಮ ದತ್ತ ನಗರ, ರಾಷ್ಟ್ರೀಯ ಕ್ರೀಡಾಪಟು ಚಂದ್ರಶೇಖರ ರೈ, ಅಖಿಲ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ, ಪ್ರೆಸ್ಟೀಜ್ ಹೋಟೆಲ್ ಮಾಲೀಕ ರಾದ ದಾಮೋದರ್, ಯೋಗೀಶ್ ಶೆಟ್ಟಿ ಜಪ್ಪು, ಜನಾರ್ಧನ ಅರ್ಕುಳ ಮೊದಲಾದವರು ಉಪಸ್ಥಿತರಿದ್ದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಭವಾನಿ ಕತ್ತಲ್ಸಾರ್ ಪುಸ್ತಕ ಬಿಡುಗಡೆಗೊಳಿಸಿದರು. ಆಟಿ ಪುಸ್ತಕದ ಮುನ್ನುಡಿ ಬರೆದ ಇತ್ತೀಚೆಗೆ ದೈವಾಧೀನರಾದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಸಂಸ್ಮರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವಂಡರ್ ವರ್ಲ್ಡ್ ರೆಕಾರ್ಡ್ ಮಾಡಿದ ಮಾ. ತಕ್ಷಿಲ್ ಎಂ ದೇವಾಡಿಗ ಮತ್ತು ಹೋಟೆಲ್ ಡಿಂಕಿ ಡೈನ್ ಸ್ವರ್ಣಸುಂದರ್ ದಂಪತಿಗಳನ್ನು ಸನ್ಮಾನಿಸಲಾಯಿತು.

ದಯಾನಂದ ಕತ್ತಲ್ಸಾರ್ ಸ್ವಾಗತಿಸಿ, ಡಿಂಕಿ ಡೈನ್ ಮಾಲಕರಾದ ಸ್ವರ್ಣಸುಂದರ್ ವಂದಿಸಿದರು. ಪುರುಷೋತ್ತಮ ಗೋಳಿಪಲ್ಕೆ ನಿರೂಪಿಸಿದರು.

Comments are closed.