ಮಂಗಳೂರು : ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಪ್ರತಿ ಮನೆಮನೆಗಳಲ್ಲೂ ರಾಮಾಯಣ ಪಾರಾಯಣ ನಡೆಯುತ್ತಿತ್ತು ಎಂಬುದು ಹಿರಿಯರಿಂದ ತಿಳಿದ ವಿಚಾರ. ಆದರೆ ಈಗ ಕೆಲವೊಂದು ಕಡೆಗಳಲ್ಲಿ ಮಾತ್ರವೇ ಆಚರಣೆ ನಡೆದು ಬರುತ್ತಿದ್ದು ನಾಡಿನ ಎಲ್ಲಾ ಮಠ ಮಂದಿರ ದೇವಸ್ಥಾನಗಳಲ್ಲೂ ರಾಮಾಯಣ ಪಾರಾಯಣ ನಡೆಯಬೇಕು. ಅದರಲ್ಲೂ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ತುಳು ಮಂದಾರ ರಾಮಾಯಣವೇ ಪಾರಾಯಣ ಆಗಬೇಕು. ಹಾಗಾದರೆ ಮಾತ್ರ ಈ ಕಾರ್ಯಕ್ರಮದ ಮುಖ್ಯ ಗುರಿತಲುಪಲು ಸಾಧ್ಯ ಹಾಗೂ ತುಳುನಾಡಿನ ಮಹಾನ್ ಕವಿಗೆ ನಾಡಿನ ಗೌರವ ಸಲ್ಲಲು ಸಾಧ್ಯ ಎಂದು ನಿವೃತ್ತ ಭವಿಷ್ಯನಿಧಿ ಅಧಿಕಾರಿ ತಿಮ್ಮಪ್ಪ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಶಕ್ತಿನಗರದ ಚಾವಡಿಯಲ್ಲಿ ನಡೆಯುತ್ತಿರುವ ತುಳು ವರ್ಲ್ಡ್ ಮಂಗಳೂರು ಹಾಗೂ ತುಳುವೆರೆ ಕೂಟ ಶಕ್ತಿನಗರ ಇವರು ಸಂಯುಕ್ತವಾಗಿ ಆಯೋಜಿಸಿರುವ ಏಳದೆ ಮಂದಾರ ರಾಮಾಯಣ ಸುಗಿಪು ದುನಿಪು ಕಾರ್ಯಕ್ರಮದ ಎರಡನೇ ದಿನದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶ್ರೀಮತಿ ಸರೋಜಿನಿ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಸಂಘಟಕ ವಿಮರ್ಶಕ ನವನೀತ ಶೆಟ್ಟಿ ಕದ್ರಿ, ಯಕ್ಷಗಾನ ಭಾಗವತೆ ಭವ್ಯಶ್ರೀ ಕುಲ್ಕುಂದ, ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಏಳದೆ ಮಂದಾರ ರಾಮಾಯಣದ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವೆರೆ ಕೂಟ ಶಕ್ತಿನಗರದ ಕಾರ್ಯದರ್ಶಿ ಸುಧಾಕರ ಜೋಗಿ ಸ್ವಾಗತಿಸಿ ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ವಂದಿಸಿದರು. ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು.
ಆ ಬಳಿಕ ಮಂದಾರ ರಾಮಾಯಣದ ಎರಡನೇ ಅಧ್ಯಾಯ ಬಂಗಾರದ ತೊಟ್ಟಿಲ್ ವಾಚನ ಪ್ರವಚನ ನಡೆಯಿತು. ಯಕ್ಷಗಾನದ ಖ್ಯಾತ ಭಾಗವತರು ಗಳಾದ ಪ್ರಶಾಂತ ರೈ ಪುತ್ತೂರು ಹಾಗೂ ಶ್ರೀಮತಿ ಭವ್ಯಶ್ರೀ ಕುಲ್ಕುಂದ ವಾಚನ ನಡೆಸಿದರು. ಖ್ಯಾತ ವಿಮರ್ಶಕ ನವನೀತ ಶೆಟ್ಟಿ ಕದ್ರಿ ಪ್ರವಚನ ನಡೆಸಿದರು. ಕಾರ್ಯಕ್ರಮವು ಜನಮನ ಸೂರೆಗೊಂಡಿತು.
ತುಳು ಕಾವ್ಯದ ರಸ ಅನುಭೂತಿ ಪಡೆದ ಪ್ರೇಕ್ಷಕರು
ಮಂದಾರ ರಾಮಾಯಣದ ಎರಡನೇ ದಿನದ ಬಂಗಾರದ ತೊಟ್ಟಿಲು ವಾಚನವನ್ನು ಕದ್ರಿ ನವನೀತ್ ಶೆಟ್ಟಿ ವ್ಯಾಖ್ಯಾನಿಸಿದರೆ ತಮ್ಮ ಸುಶ್ರಾವ್ಯ ಕಂಠದಿಂದ ಪ್ರಶಾಂತ್ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ತಮ್ಮ ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ನನ್ನಾಗಿಸಿದರು. ಸುಗಿಪು ದುನಿಪು ಕಾರ್ಯಕ್ರಮ ಮುಗಿದಾಗ ಎಲ್ಲರಿಗೂ ಇಷ್ಟುಬೇಗ ಕಾರ್ಯಕ್ರಮ ಮುಗಿಯಿತೆ ಎಂದೆನಿಸಿತು.
Comments are closed.