
ಮಂಗಳೂರು: ಗೋವು ಕಳ್ಳತನಕ್ಕೆ ಸಂಬಂಧಿಸಿ ಹಳೆ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಅಕ್ರಮ ಗೋ ಸಾಗಾಟ, ಗೋ ಕಳವಿಗೆ ಸಂಬಂಧಿಸಿ ಮಾಹಿತಿ ದೊರಕಿದಾಗ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋ ಕಳವು ಮತ್ತು ಅಕ್ರಮ ಸಾಗಾಟ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿ ಗಣಿಸಿದ್ದು, ಇವುಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಕ್ರಮ ಗೋ ವ್ಯವಹಾರದ ಬಗ್ಗೆ ಮಾಹಿತಿ ನಮಗೆ ಕೊಡಿ; ನಾವು ಕಠಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು..
ಗೋವು ಕಳ್ಳತನಕ್ಕೆ ಸಂಬಂಧಿಸಿ ಹಳೆ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಬಿಗಿ ಗೊಳಿಸುವುದರ ಜತೆಗೆ ಹೆಚ್ಚಿಸಲಾಗುತ್ತಿದೆ. ಗೋ ಕಳವು ಅಪರಾಧಿಗಳ ಚಟುವಟಿಕೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅವರ ಮನೆಗಳಲ್ಲಿಯೂ ತಪಾಸಣೆ ನಡೆಸಲಾಗುವುದು. ಕೆಲವು ನಿರ್ದಿಷ್ಟ ಪ್ರದೇಶಗಳ ಗೋ ಕಳವು ಅಪರಾಧಿಗಳ ಮೇಲೂ ನಿಗಾ ಇರಿಸಲಾಗಿದೆ.
ಮಂಗಳೂರು ನಗರ ಮಾತ್ರ ವಲ್ಲದೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಸಂಬಂಧಿಸಿದ ಇಂತಹ ಅಪರಾಧಿಗಳ ಬಗ್ಗೆಯೂ ಸಂಬಂಧಪಟ್ಟ ಪೊಲೀಸ್ ವರಿಷ್ಠರಿಗೆ ಪತ್ರ ಬರೆಯಲಾಗಿದೆ. ಕುಟ್ಟ ಇಮ್ರಾನ್, ಬಶೀರ್, ಅನ್ಸಾರ್ ಮೊದಲಾದ ತಲೆಮರೆಸಿಕೊಂಡಿರುವ ಗೋ ಕಳವು ಅಪರಾಧಿಗಳನ್ನು ಬಂಧಿಸಲು ವಿಶೇಷ ತಂಡದ ಮೂಲಕ ಪತ್ತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
Comments are closed.