
ಮಂಗಳೂರು: ನಗರದ ಕಾಲೇಜೊಂದರ ತೃತೀಯ ವರ್ಷದ ಬಿಬಿಎ ವಿದ್ಯಾರ್ಥಿಯೋರ್ವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಮೂಡುಶೆಡ್ಡೆಯಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಚಿಕ್ಕಮಗಳೂರಿನ ಎಲ್ಡನ್ ಲಾರ್ಡ್ ಪೆರಿಶ್ (20) ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನ ಕಾಲೇಜು ಬಿಟ್ಟ ಬಳಿಕ 10 ಮಂದಿ ವಿದ್ಯಾರ್ಥಿಗಳು ಮೂಡುಶೆಡ್ಡೆಯ ಖಾಸಗಿ ರೆಸಾರ್ಟಿಗೆ ತೆರಳಿದ್ದು, ಬಳಿಕ ಈಜುಕೊಳದಲ್ಲಿ ಈಜುತ್ತಿದ್ದಾಗ ಎಲ್ಡನ್ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸಂಜೆ ಸುಮಾರು 4 ಗಂಟೆ ಹೊತ್ತಿಗೆ ನೀರಿನಲ್ಲಿ ಮುಳುಗಿ ಅಸ್ವಸ್ಥನಾದ ಈತನನ್ನು ಜತೆಗಿದ್ದವರೇ ವಾಹನದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದರು. ಆದರೆ ಜೀವ ಉಳಿಸಲಾಗಲಿಲ್ಲ.
ಚಿಕ್ಕಮಗಳೂರಿನ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯವನಾಗಿದ್ದ ಈತ ಮಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.