ಕರಾವಳಿ

ಮಣಿಪಾಲದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ ರೂಪಿಸಲು ಯೋಜನೆ- ಡಿಸಿ

Pinterest LinkedIn Tumblr

ಉಡುಪಿ: ಮಣಿಪಾಲದಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು, ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ರೂಪಿಸಲು ಜಿಲ್ಲಾಡಳಿತ ಹಾಗೂ ಮಣಿಪಾಲ ವಿವಿಯ ಸಹಯೋಗದಲ್ಲಿ ವ್ಯವಸ್ಥಿತ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಣಿಪಾಲದಲ್ಲಿ ಸಂಚಾರ ದಟ್ಟಣೆಯಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಪ್ರಸ್ತುತ ಮಣಿಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ, ಇದೇ ಸಮಯದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆಗೆ ಯೋಜನೆ ರೂಪಿಸಿದ್ದಲ್ಲಿ, ಅನುಷ್ಠಾನ ಮಾಡಲು ಸುಲಭವಾಗಲಿದ್ದು, ಈ ಕುರಿತಂತೆ ಮಣಿಪಾಲ ವಿವಿ ಆರ್ಕಿಟೆಕ್ ವಿಭಾಗದಿಂದ ಸೂಕ್ತ ಯೋಜನೆ ತಯಾರಿಸಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸುಸ್ಥಿರ ಸಂಚಾರ ವ್ಯವಸ್ಥೆ ಯೋಜನೆ ರೂಪಿಸುವಾಗ, ಪಾದಚಾರಿಗಳಿಗೆ ಪುಟ್ಪಾತ್ ವ್ಯವಸ್ಥೆ, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ, ಬಸ್ ನಿಲುಗಡೆಗೆ ವ್ಯವಸ್ಥೆ, ಬೈಸಿಕಲ್ ಟ್ರಾಕ್ ಸೇರಿದಂತೆ ಸಂಚಾರಿ ಸಂಬಂದಿತ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಪೊರೈಸುವಂತಹ ಅತ್ಯಂತ ವ್ಯವಸ್ಥಿತ ಯೋಜನೆ ತಯಾರಿಸಿ ನೀಡುವಂತೆ ತಿಳಿಸಿದ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಯೋಜನೆ ಅನುಷ್ಠಾನ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸಹ ಸಭೆ ನಡೆಸಿ ಸೂಕ್ತ ಸೂಚನೆ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಮಣಿಪಾಲ ವಿವಿ ಆರ್ಕಿಟೆಕ್ ವಿಭಾಗದ ಮುಖ್ಯಸ್ಥರು ಹಾಗೂ ಮಣಿಪಾಲ ಸಂಸ್ಥೆಯ ಮತ್ತಿತರರು ಉಪಸ್ಥಿತರಿದ್ದರು.

Comments are closed.