ಕರಾವಳಿ

ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಭೇಟಿ : ಶಾಶ್ವತ ಪರಿಹಾರದ ಭರವಸೆ

Pinterest LinkedIn Tumblr

ಮಂಗಳೂರು : ಕಳೆದ ಮೂರು ದಿನಗಳಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಗಾಳಿಮಳೆ ಯೊಂದಿಗೆ ಕಡಲ್ಕೊರೆತದ ಆರ್ಭಟವು ತೀವ್ರಗೊಂಡಿದೆ. ತೀರದ ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ಕಡಲತಡಿಯ ಜನರು ಆತಂಕದಿಂದ ಬದುಕುವಂತಾಗಿದೆ.

ಭಾರೀ ಗಾಳಿ-ಮಳೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.

ಉಳ್ಳಾಲದ ಕಿಲೇರಿಯಾ ನಗರದಲ್ಲಿ ಐದು ಮನೆಗಳು ಬಹುತೇಕ ಸಮುದ್ರಪಾಲಾಗಿವೆ, ಹಾಗೇಯೇ ಕೈಕೋ, ಉಚ್ಚಿಲ ಬೆಟ್ಟಂಪಾಡಿ, ಕೋಟೆ, ಸೋಮೇಶ್ವರ ಸೇರಿದಂತೆ ಕಡಲ ತಡಿಯ ಹಲವಾರು ಮನೆಗಳು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಗೊಂಡಿವೆ. ಗುರುವಾರವೂ ಕಡಲ್ಕೊರೆತದಿಂದಾಗಿ ಹಲವು ಮನೆಗಳು ಕುಸಿದಿದ್ದು, ತೆಂಗಿನಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಗುರುವಾರ ಭೇಟಿ ನೀಡಿದ ಸಂಸದ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲು ಅವರು ಕಡಲ್ಕೊರೆತದ ಪ್ರಭಾವವನ್ನು ವೀಕ್ಷಿಸಿ, ಸಂತ್ರಸ್ತರಿಗೆ ಸರ್ಕಾರದ ಸಹಾಯದ ಭರವಸೆ ನೀಡಿದರು.

ಉಳ್ಳಾಲದ ಸೋಮೇಶ್ವರ ಪ್ರದೇಶದಲ್ಲಿ ಪ್ರತಿ ಬಾರಿ ಕಡಲ್ಕೊರೆತ ನಡೆಯುತ್ತಿದ್ದು, ಅಲ್ಲಿನ ಸ್ಥಳೀಯ ನಿವಾಸಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲೆಗಳ ಅಬ್ಬರದಿಂದಾಗಿ ಪ್ರತೀ ಮಳೆಗಾಲದಲ್ಲಿ ಹಲವು ಮನೆಗಳಿಗೆ ಹಾನಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುವುದೆಂದು ಈ ವೇಳೆ ಸಂಸದರು ಹೇಳಿದರು.

ಕಡಲ್ಕೊರೆತ ತಡೆಗೆ ಸಾಮಾನ್ಯವಾಗಿ ಪ್ರತಿ ವರ್ಷ ಕಲ್ಲು ಹಾಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ, ಅಬ್ಬರದ ಅಲೆಗಳಿಗೆ ಸಿಲುಕಿ ಹಾಸಲಾಗುವ ಕಲ್ಲುಗಳು ಸಮುದ್ರಪಾಲಾಗುತ್ತಿವೆ. ಇದರಿಂದ ಪ್ರತಿ ಸಲ ತೀರ ಪ್ರದೇಶದ ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಇದೀಗ ಕಡಲ್ಕೊರೆತ ತಡೆಗೆ ಬರ್ಮ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಇದರ ಮೂಲಕ 10 ಕಡೆಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ 2 ಕಡೆಗಳಲ್ಲಿ ಕಾಮಗಾರಿ ಮುಗಿದಿದ್ದು, ಜನರಿಂದ ಸಕಾರಾತ್ಮಕ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಉಳಿದ 8 ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಲ್ಲಿ ಮತ್ತಷ್ಟು ಪರಿಹಾರ ಕಾರ್ಯವಾಗಲಿದೆ ಎಂದರು.

ಪ್ರಸ್ತುತ ಉಚ್ಚಿಲ, ಉಳ್ಳಾಲ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಈ ಪ್ರದೇಶಗಳಲ್ಲಿ ಸಮುದ್ರ ಸವೆತ ತಡೆಗೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಉಚ್ಚಿಲದಲ್ಲಿ ಹಾನಿಗೊಂಡಿರುವ ಪ್ರದೇಶಗಳ ಅವಲೋಕನ ನಡೆಸಿ ಶಾಶ್ವತ ಪರಿಹಾರ ಕ್ರಮದ ಬಗ್ಗೆ ಸಂಸದರು ಭರವಸೆ ನೀಡಿದರು.

Comments are closed.