ಮಂಗಳೂರು : ಕರಾವಳಿಯಲ್ಲಿ ಸತತ ಮೂರು ದಿನಗಳಿಂದ ಧಾರಾಕರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಉಳ್ಳಾಲ ದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.ಸಮುದ್ರದ ಭೋರ್ಗರೆತ ಭೀತಿ ಹುಟ್ಟಿಸುವಂತಿದೆ. ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದೆ.
ಕಳೆದ ಮೂರು ದಿನಗಳಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಗಾಳಿಮಳೆಯೊಂದಿಗೆ ಕಡಲ್ಕೊರೆತದ ಆರ್ಭಟವು ತೀವ್ರಗೊಂಡಿದೆ. ತೀರದ ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ಕಡಲತಡಿಯ ಜನರು ಆತಂಕದಿಂದ ಬದುಕುವಂತಾಗಿದೆ.
ಭಾರೀ ಗಾಳಿ-ಮಳೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.
ಕಡಲ್ಕೊರೆತದಿಂದಾಗಿ ಉಚ್ಚಿಲ ಕೋಟೆ ಬಳಿ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ. ಉಚ್ಚಿಲ ಕೋಟೆ ನಿವಾಸಿಗಳಾಗಿರುವ ವಿಶ್ವನಾಥ್ ಹಾಗೂ ನಾಗೇಶ್ ಎಂಬವರ ಆರ್ ಸಿ ಸಿ ಮನೆಯ ಶೆಡ್ ಕುಸಿದಿದೆ. ಎರಡು ತೆಂಗಿನ ಮರ ಹಾಗೂ ಆರು ಮರ ಮರ ಸಮುದ್ರಪಾಲಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.