ಮಂಗಳೂರು : ಮಂಗಳೂರು ಮಹಾನಗರದಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಮಂಗಳೂರು ನಗರದ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅದೇ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭವಾದಂತೆ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಮಂಗಳೂರಿಗೆ ಬಂದು ಹಾಸ್ಟೆಲ್ ಗಳಲ್ಲಿ ನೆಲೆಸುವುದರಿಂದ ಅಲ್ಲಿಯೂ ಸಾಕಷ್ಟು ಅನಾನುಕೂಲತೆಗಳು ಉಂಟಾಗಲಿವೆ.
ಈ ತೊಂದರೆ ಉಂಟಾಗುವ ಸಾಧ್ಯತೆ ಇರುವುದನ್ನು ಮನಗಂಡು ಮಂಗಳೂರು ನಗರ ದಕ್ಷಿಣ ಡಿ ವೇದವ್ಯಾಸ ಕಾಮತ್ ಅವರು ಈ ಶೈಕ್ಷಣಿಕ ವರ್ಷವನ್ನು ಒಂದು ವಾರ ತಡವಾಗಿ ಪ್ರಾರಂಭಿಸಲು ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಜೂನ್ ಒಂದನೇ ತಾರೀಕಿನಿಂದ ಹಿರಿಯ, ಕಿರಿಯ ಪ್ರಾರ್ಥಮಿಕ ಶಾಲೆ, ವಿದ್ಯಾ ಸಂಸ್ಥೆಗಳಲ್ಲಿ ತರಗತಿಗಳು ಪ್ರಾರಂಭವಾಗಲಿದ್ದು, ಮಳೆ ಬರದೇ ಇದ್ದರೆ ನೀರಿನ ಸಮಸ್ಯೆ ಇನ್ನು ಹೆಚ್ಚು ತೊಂದರೆಗೆ ಕಾರಣವಾಗಲಿದೆ. ಹೀಗಿರುವಾಗ ತಕ್ಷಣ ಜಿಲ್ಲಾಡಳಿತ ಶಿಕ್ಷಣಾಧಿಕಾರಿಗಳ ಮೂಲಕ ಸುತ್ತೋಲೆಯನ್ನು ಹೊರಡಿಸಿ ಕನಿಷ್ಟ ಒಂದು ವಾರವಾದರೂ ತರಗತಿಗಳನ್ನು ಮುಂದೂಡಬೇಕು. ಈ ಬಗ್ಗೆ ತಾವು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಶಾಸಕ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.