ಕರಾವಳಿ

ಜಿಲ್ಲೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಪಾಲಿಕೆ ಹಾಗೂ ಉಸ್ತುವಾರಿ ಸಚಿವರೇ ಕಾರಣ : ಸಂಜೀವ ಮಠಂದೂರು

Pinterest LinkedIn Tumblr

ಮಂಗಳೂರು, ಮೇ 21: ನಗರದಲ್ಲಿ ಈ ಬಾರಿ ತೀವ್ರವಾಗಿ ನೀರಿನ ಸಮಸ್ಯೆ ಉಂಟಾಗಲು ಮನಪಾ ಆಡಳಿತ ಹಾಗೂ ಉಸ್ತುವಾರಿ ಸಚಿವರೇ ನೇರಾ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಕಿಂಡಿ ಅಣೆಕಟ್ಟನ್ನು ಎತ್ತರಿಸಿದಂತೆಯೇ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಂದಾಯ ಅಧಿಕಾರಿ ಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವಲ್ಲಿ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ತಿಳಿಯುತ್ತಿಲ್ಲ ಎಂದು ದೂರಿದರು.

ನದಿಗಳಲ್ಲಿ ಮರಳು ರೂಪದಲ್ಲಿ ಹೂಳು ತುಂಬಿ ನೀರು ಸಮಸ್ಯೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಮರಳಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಮರಳು ಸಿಗುತ್ತದೆ. ಆದರೆ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಕೇವಲ 9 ಜನರಿಗೆ ಮಾತ್ರವೇ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಅದರಲ್ಲೂ ಅವೈಜ್ಞಾನಿಕ ಷರತ್ತು ವಿಧಿಸಲಾಗಿದೆ.ಅದರ ಪ್ರಕಾರ 51000 ಮೆಟ್ರಿಕ್ ಟನ್ ಮರಳು ಲಭ್ಯವಿರುವ ದಿಣ್ಣೆಗಳಿಂದ 1000 ಮೆಟ್ರಿಕ್ ಟನ್ ಮರಳನ್ನು ಮಾತ್ರವೇ ತೆಗೆಯಲು ಅವಕಾಶವಿರುತ್ತದೆ. ಉಳಿದ ಮರಳು ಅಲ್ಲಿಯೇ ಉಳಿದು ಹೂಳಾಗಿ ನೀರು ಸಂಗ್ರಹಕ್ಕೆ ಅಡ್ಡಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಸೂಕ್ತ ಮರಳು ನೀತಿಯನ್ನು ಜಾರಿಗೆ ತರಲಾಗುತ್ತಿಲ್ಲ. ಇದರಿಂದ ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಕ್ಕೆ ಉಸ್ತುವಾರಿ ಸಚಿವರು, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಎಂದು ಅವರು ಹೇಳಿದರು.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಕೇವಲ ಅಧಿಕಾರಕ್ಕಾಗಿ ಪರಸ್ಪರ ಕಾಲೆಳೆಯುವುದರಲ್ಲಷ್ಟೇ ನಿರತವಾಗಿದೆ ಎಂದು ಅವರು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ( ಸುರತ್ಕಲ್) ಕ್ಷೇತ್ರದ ಶಾಕ ಭರತ್ ಶೆಟ್ಟಿ, ಪ್ರಮುಖರಾದ ರವಿಶಂಕರ್ ಮಿಜಾರ್, ಸಂಜಯ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Comments are closed.