ಕರಾವಳಿ

ಅಕ್ರಮ ಮರಳು ಹಿಡಿದಿದ್ದೇ ತಪ್ಪಾಯ್ತಾ?: ಕಂಡ್ಲೂರಿನಲ್ಲಿ ಪೊಲೀಸರ ಮೇಲೆ ಕೈ, ಠಾಣೆಗೆ ಕಲ್ಲು ತೂರಿ ದುಂಡಾವರ್ತನೆ!

Pinterest LinkedIn Tumblr

ಕುಂದಾಪುರ: ಜಿಲ್ಲೆಯಲ್ಲಿ ಬಡವರಿಗೆ ಮರಳು ಸಿಗುತ್ತಿಲ್ಲವಾದರೂ ಸಿರಿವಂತರಿಗೆ ಮಾತ್ರ ಮರಳು ಸಿಗುತ್ತಿದೆ. ರಾತ್ರೋರಾತ್ರಿ ಮರಳು ದಂಧೆಕೋರರು ನಡೆಸುವ ಅಕ್ರಮ ಮರಳುಗಾರಿಕೆಯಿಂದಾಗಿ ಹಣಕೊಟ್ಟು ಕಾಳಸಂತೆಯಲ್ಲಿ ಮರಳು ಕೊಳ್ಳುವವರಿಗೆ ಎಲ್ಲವೂ ನಿರಾಂತಕ. ಇಂತಹ ಅಕ್ರಮಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ಅಕ್ರಮ ತಡೆಯುವ ಸಲುವಾಗಿ ದಾಳಿ ನಡೆಸಿದ ಉದಾಹರಣೆಗಳು ಹಲವು ತಾಲೂಕಿನಲ್ಲಿದೆ. ಅಂತೆಯೇ ಅಕ್ರಮ ಸಾಗಾಟ ತಡೆದು ವಾಹನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಬಂದ ಪೊಲೀಸರ ಮೇಲೆ ಕೈ ಹಾಕಿ ಪೊಲೀಸ್ ಠಾಣೆ ಮೇಲೆ ಕಲ್ಲೂ ತೂರಿದ ಆತಂಕಕಾರಿ ಘಟನೆ ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ 19 ವಿರುದ್ಧ ಪ್ರಕರಣ ದಾಖಲಾಗಿದ್ದು ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಕಂಡ್ಲೂರು ಜೆ.ಎಮ್.ರೋಡ್ ನಿವಾಸಿ ಶಾಹಿದ್ ಬೆಟ್ಟೆ (30), ಕಂಡ್ಲೂರು ಕಾವ್ರಾಡಿ ನಿವಾಸಿಗಳಾದ ಜಾಕಿರ್ ಹುಸೇನ್ (32), ಕರಾಣಿ ಶಾಕಿರ್ (24), ಕಂಡ್ಲೂರು ಕಾವ್ರಾಡಿ ಜನತಾ ಕಾಲನಿ ನಿವಾಸಿ ತಬ್ರೇಜ್ ಸಾಹೇಬ್ (26) ಬಂಧಿತ ಆರೋಪಿಗಳು. ಉಳಿದಂತೆ ಪ್ರಕರಣದಲ್ಲಿರುವ ನೌಶಾದ್ ಆಲಿ ಕೋಟೆ, ಕರಾಣಿ ಮುಸೀನ್, ಶಾಹಿದ್, ಕರಾಣಿ ನದೀಮ್, ಕರಾಣಿ ಶಾಹಿದ್, ರಯಾನ್, ಕರಾಣಿ ಬಿಲಾಲ್, ಕರಾಣಿ ಮನ್ಸೂರ್, ಮಹಮ್ಮದ್, ಸದಾಕತ್, ಜಿಮ್ಮಿ ಜೆಫ್ರಿ, ಅಬ್ದುಲ್ಲ, ಫಹಾದ್, ನಹೀಮ್, ಹಮೀದ್ಸೇರಿ ಎನ್ನುವರ ವಿರುದ್ಧ ದೂರು ದಾಖಲಾಗಿದೆ.

(ಪಿಎಸ್ಐ ಶ್ರೀಧರ ನಾಯ್ಕ್)

ನಡೆದಿದ್ದೇನು?
ಕಂಡ್ಲೂರು ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಅಲರ್ಟ್ ಆಗಿದ್ದರು. ಗುರುವಾರ ರಾತ್ರಿ KA-20-M-8231 ನಂಬರಿನ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪಿಎಸ್ಐ ಶ್ರೀಧರ ನಾಯ್ಕ್ ವಾಹನ ವಶಕ್ಕೆ ಪಡೆದು ಠಾಣೆಗೆ ತಂದು ತಾನು ಠಾಣೆಗೆ ಒಳಪ್ರವೇಶಿಸುತ್ತಿರುವಾಗ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ದೌಡಾಯಿಸಿದ ಮರಳು ದಂಧೆಕೋರರು ಹಾಗೂ ಅವರಿಗೆ ಸಹಕರಿಸುವ ಒಂದಷ್ಟು ಮಂದಿ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನು ಸುತ್ತುಗಟ್ಟಿ ‘ನಮ್ಮ ಹುಡುಗರು ಹೊಯಿಗೆ ಸಾಗಾಟ ಮಾಡಿದರೆ ಅವರನ್ನೆ ಹಿಡಿಯುತ್ತೀರಿ, ನಮ್ಮ ವಾಹನದ ಮೇಲೆ ಕೇಸು ಮಾಡಬೇಡಿ, ಬಿಟ್ಟುಬಿಡಿ’ ಎಂದು ಏರುದನಿಯಲ್ಲಿ ಅವಾಜ್ ಹಾಕಿ ಮೈ ಮೇಲೆ ಕೈಹಾಕಿ ತಳ್ಳಿದ್ದಲ್ಲದೇ ಅಲ್ಲಿದ್ದವರು ಠಾಣೆಯ ಮೇಲೆ ಕಲ್ಲನ್ನು ಎಸೆದು ದುಂಡಾವರ್ತನೆ ತೋರಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ನಾಲ್ವರನ್ನು ಬಂಧಿಸಿ ಕೆಲ ವಾಹನ ವಶಕ್ಕೆ ಪಡೆದಿದ್ದು ಇತರರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್ , ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಆಗಮಿಸಿ ಪರಿಶೀಲಿಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅಕ್ರಮ ಕೂಟ ಸೇರಿ ಸಾರ್ವಜನಿಕ ಸೊತ್ತಾಗಿರುವ ಪೊಲೀಸ್ ಠಾಣೆಯ ಕಟ್ಟಡಕ್ಕೆ ಕಲ್ಲುಗಳನ್ನು ಎಸೆದು ಹಾನಿ ಮಾಡಿ, ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2019 ಕಲಂ: 143, 147, 148,341, 353, 504, 332 ಜೊತೆಗೆ 149 ಐಪಿಸಿ ಮತ್ತು ಕಲಂ: 2 The Prevention of destruction and loss of property Act-1981 ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.