ಮಿರ್ಜಾಪುರ್, ಉತ್ತರಪ್ರದೇಶ: “ಜಗತ್ತಿನಲ್ಲೇ ಓರ್ವ ಅದ್ಭುತವಾದ ನಟನನ್ನು ನೀವು ನಿಮ್ಮ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದ್ದೀರಿ. ಆದರೆ, ನರೇಂದ್ರ ಮೋದಿಗಿಂತ ನೀವು ಅಮಿತಾಬ್ ಬಚ್ಚನ್ರನ್ನೇ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬಹುದಿತ್ತು. ಏಕೆಂದರೆ ಈ ಇಬ್ಬರೂ ನಾಯಕರು ಒಳ್ಳೆಯ ನಟರು ಆದರೆ, ಜನರಿಗಾಗಿ ಏನನ್ನೂ ಮಾಡಲೊಲ್ಲರು” ಎಂದು ಹೀಯಾಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತ್ತೆ ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.
ಶುಕ್ರವಾರ ಉತ್ತರಪ್ರದೇಶದ ಮಿರ್ಜಾಪುರ್ನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ಟೀಕಾಪ್ರಹಾರ ನಡೆಸಿದ ಪ್ರಿಯಾಂಕ, “ಮೋದಿ ಜಗತ್ತಿನಲ್ಲೇ ಸುಪ್ರಸಿದ್ಧ ನಟ. ಅವರಂತೆ ನಟಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಕಳೆದ ಐದು ವರ್ಷದಿಂದ ಅವರು ನಿರಂತರವಾಗಿ ನಟನೆ ಮಾಡುತ್ತಲೇ ಇದ್ದಾರೆ. ನೀವು ಸಹ ಒಬ್ಬ ನಟನೇ ತಮಗೆ ಬೇಕು ಎಂದು ಕಳೆದ ಬಾರಿ ಮೋದಿಯನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಆದರೆ, ಮೋದಿಗಿಂತ ತಾವು ಖ್ಯಾತ ನಟ ಅಮಿತಾಬ್ ಬಚ್ಚನ್ರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಬಹುದಿತ್ತು” ಎಂದು ಹೀಯಾಳಿಸಿದ್ದಾರೆ.
ಲೋಕಸಭೆ 7 ನೇ ಹಾಗೂ ಕೊನೆಯ ಹಂತದ ಚುನಾವಣೆ ಮೇ.19 ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕೊನೆಯ ದಿನವೂ ಸಹ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಹರಿಹಾಯ್ದಿರುವುದು ಉಲ್ಲೇಖಾರ್ಹ.
ಕೊನೆಯ ಹಂತದ ಚುನಾವಣೆಯಲ್ಲಿ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ಚಂಡೀಗಡ, ಉತ್ತರಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ 8 ರಾಜ್ಯಗಳ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ. ಮಿರ್ಜಾಪುರ್ ಸೇರಿದಂತೆ ಉತ್ತರಪ್ರದೇಶದ 13 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.