ಮಂಗಳೂರು, ಮೇ 14: ಸಲಿಂಗ ಕಾಮ ಆರೋಪದಡಿ ದೈವ ಪಾತ್ರಿಯೊಬ್ಬರ ತಲೆ ಬೋಳಿಸಿ ಮಹಿಳೆ ಸಹಿತಾ ನಾಗರೀಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ಸ್ವಯಂಪ್ರೇರಿತ (ಸೊಮೋಟೋ)ವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಸಲಿಂಗ ಕಾಮ ವಿಚಾರದಲ್ಲಿ ದೈವ ಪಾತ್ರಿಯೊಬ್ಬರ ತಲೆ ಬೋಳಿಸಿ ಮಹಿಳೆ ಸಹಿತಾ ನಾಗರೀಕರು ಹಲ್ಲೆ ನಡೆಸಿದಲ್ಲದೇ ಆತನ ಕೈಕಡಗ ತೆಗೆಸಿದ ಘಟನೆ ನಗರದ ಅಳಕೆ ಬಳಿ ನಡೆದಿತ್ತು.ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ದೈವಪಾತ್ರಿಯೊಬ್ಬರಿಗೆ ಮಹಿಳೆಯರೂ ಸಹಿತ ಕೂದಲನ್ನು ಬಲವಂತವಾಗಿ ಕತ್ತರಿಸಿ ಹಲ್ಲೆ ನಡೆಸಿರುವುದು ದಾಖಲಾಗಿದೆ.
ನಗರದ ಬಿಕರ್ನಕಟ್ಟೆಯ ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ಹಲ್ಲೆ ನಡೆಸಲಾಗಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕೇಶ್ ಅವರಿಗೆ ಸಲಿಂಗಕಾಮದ ಬಗ್ಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯ್ಯಲ್ಲಿನ ಖಡ್ಗ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಅಲ್ಲದೇ, ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.ಈ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಆರಂಭವಾಗಿದೆ. ಆದರೆ ಈ ಘಟನೆ ಕುರಿತಾಗಲಿ, ಹಲ್ಲೆಯ ಬಗ್ಗೆಯಾಗಲೀ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ.
ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ಪ್ರಕರಣದ ವಿಡಿಯೋವನ್ನು ಅಧಾರವಾಗಿಟ್ಟುಕೊಂಡು ಪೊಲೀಸರೇ ಸ್ವಯಂಪ್ರೇರಿತ (ಸೊಮೋಟೋ)ವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ವಿಡಿಯೋ ಅಧಾರವಾಗಿಟ್ಟುಕೊಂಡು ಪೊಲೀಸರು ಆರೋಪಿಗಳ ಪತ್ತೆಕಾರ್ಯಕ್ಕೆ ಬಲೆ ಬೀಸಿದ್ದಾರೆ.