ಕರಾವಳಿ

ಮಂಗಳೂರಿನಲ್ಲಿ ಭೀಭತ್ಸ ರೀತಿಯಲ್ಲಿ ಹತ್ಯೆಗೊಳಗಾದ ಮಹಿಳೆಯ ಸ್ಕೂಟರ್‌ ಪತ್ತೆ : ಮಹತ್ವದ ಸಾಕ್ಷ್ಯ ಲಭ್ಯ

Pinterest LinkedIn Tumblr

ಮಂಗಳೂರು: ನಗರದಲ್ಲಿ ಭೀಭತ್ಸ ರೀತಿಯಲ್ಲಿ ಕೊಲೆಗೈಯಲ್ಪಟ್ಟ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್‌ ಸೋಮವಾರ ರಾತ್ರಿ ನಾಗುರಿ ಬಳಿ ರಸ್ತೆ ಬದಿ ಅನಾಥವಾಗಿ ಪತ್ತೆಯಾಗಿದೆ.

ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್‌ನಲ್ಲಿದ್ದ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಕೆಲವು ಸಾಕ್ಷ್ಯಗಳು ಲಭಿಸಿದ್ದು, ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶ್ರೀಮತಿ ಶೆಟ್ಟಿ ಅವರನ್ನು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಿ ದೇಹವನ್ನು ಕತ್ತರಿಸಿ ತಲೆಭಾಗವನ್ನು ಕದ್ರಿ ಪಾರ್ಕ್‌ ಬಳಿ ಹಾಗೂ ದೇಹದ ಭಾಗವನ್ನು ನಂದಿಗುಡ್ಡೆಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಕಾಲಿನ ಪಾದದ ಭಾಗ ಇನ್ನೂ ಪತ್ತೆಯಾಗಿಲ್ಲ.

ರವಿವಾರ ಬೆಳಗ್ಗೆ ಮೃತದೇಹದ ಒಂದು ಭಾಗ ಕದ್ರಿ ಪಾರ್ಕ್‌ ಬಳಿಯ ಅಂಗಡಿಯೊಂದರ ಆವರಣದಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ಸಂಜೆ ಶವ ಮಹಜರು ನಡೆಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಮಹಿಳೆ ಶ್ರೀಮತಿ ಶೆಟ್ಟಿ ಅತ್ತಾವರ ಸಮೀಪ ಎಲೆಕ್ಟ್ರಿಕಲ್‌ ಉತ್ಪನ್ನಗಳ ದುರಸ್ತಿ ಅಂಗಡಿಯನ್ನು ನಡೆಸುತ್ತಿದ್ದರು. ಪ್ರತಿನಿತ್ಯ 9 ಗಂಟೆಗೆ ಅಂಗಡಿಗೆ ಹೋಗುತ್ತಿದ್ದರು. ಯಾವಾಗಲೂ ಕಾರಿನಲ್ಲಿ ತೆರಳುತ್ತಿದ್ದ ಶ್ರೀಮತಿ ಶೆಟ್ಟಿ ಶನಿವಾರ ಮಾತ್ರ ಸ್ಕೂಟರ್‌ನಲ್ಲಿ ತೆರಳಿದ್ದರು. ಆದರೆ ಅಂದು ಅಂಗಡಿಗೆ ತೆರಳಿರಲಿಲ್ಲ. ಬದಲಾಗಿ ಆಕೆ ತನ್ನ ಸ್ಕೂಟರ್‌ನಲ್ಲಿ ಅತ್ತಾವರದಿಂದ ಗೋರಿಗುಡ್ಡೆ ಕಡೆಗೆ ತೆರಳಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.

ಅತ್ತಾವರದ ಕೆಎಂಸಿಯಿಂದ ಬಳಿಯಿಂದ ಬಿಳಿ ಬಣ್ಣದ ಸ್ಕೂಟರ್‌ನ್ನು ಚಲಾಯಿಸಿಕೊಂಡು ಮಹಿಳೆ ಹೊರಟಿದ್ದು, ಅಲ್ಲಿಂದ ಮಂಗಳಾ ಬಾರ್‌ ಮಾರ್ಗವಾಗಿ ರೋಶನಿ ನಿಲಯದ ಎದುರು ಭಾಗದಲ್ಲಿ ಮುಂದಕ್ಕೆ ಹೋಗಿದ್ದಾರೆ. ಮುಂದೆ ವೆಲೆನ್ಸಿಯಾ ಸರ್ಕಲ್‌ಗೆ ತೆರಳಿ ಅಲ್ಲಿಂದ ಬಲಕ್ಕೆ ತಿರುಗಿ ಗೋರಿಗುಡ್ಡ ಕಡೆಗೆ ಸುಮಾರು 9- 9:30ರ ನಡುವೆ ಹೋಗಿದ್ದಾರೆ.

ಆಕೆ ಕಪ್ಪು ಬಣ್ಣದ ಟಾಪ್‌, ಬಿಳಿ ಬಣ್ಣದ ಪ್ಯಾಂಟ್‌ ಧರಿಸಿ ತೆರಳುತ್ತಿರುವುದು ಸಿಸಿಟಿವಿ ಫ‌ೂಟೇಜ್‌ನಲ್ಲಿ ಕಂಡುಬಂದಿದೆ. ಇಲ್ಲಿನ ಸಿಸಿಟಿವಿ ಫ‌ೂಟೇಜ್‌ಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಶ್ರೀಮತಿ ಶೆಟ್ಟಿ

ಘಟನೆಯ ವಿವರ :

ಮಹಿಳೆಯ ದೇಹವು ನಂತೂರ್ ಮತ್ತು ಕೆಪಿಟಿಯ ನಡುವಿನ ಹೆದ್ದಾರಿಯಲ್ಲಿ (ಕದ್ರಿ ಪಾರ್ಕ್ ಬಳಿ) ಒಂದು ಗೋಣಿ ಚೀಲದಲ್ಲಿ ತುಂಬಿ ಇಡಲಾಗಿತ್ತು. ರವಿವಾರ ಕದ್ರಿ ಪಾರ್ಕ್‌ ಬಳಿಯ ಅಂಗಡಿ ಮಾಲಕ ಬಾಗಿಲು ತೆರೆಯಲು ಬಂದಾಗ ಅಂಗಡಿ ಎದುರಲ್ಲಿ ಕಟ್ಟಿರುವ ಸ್ಥಿತಿಯಲ್ಲಿದ್ದ ಗೋಣಿ ಚೀಲವೊಂದು ಪತ್ತೆಯಾಯಿತು. ತೆರೆದು ನೋಡಿದಾಗ ಮಹಿಳೆಯ ತಲೆ ಪತ್ತೆಯಾಗಿದ್ದು, ಕೂಡಲೇ ಕದ್ರಿ ಪೊಲೀಸರಿಗೆ ತಿಳಿಸಿದರು.ಇನ್ನೊಂದೆಡೆ ನಂದಿಗುಡ್ಡೆ ಬಳಿ ತಲೆಯ ಅರ್ಧಭಾಗ ಪತ್ತೆಯಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಅದು ಕದ್ರಿ ಪಾರ್ಕ್‌ ಬಳಿಯಲ್ಲಿ ಪತ್ತೆಯಾದ ಮಹಿಳೆಯ ರುಂಡದ ಭಾಗ ಎಂಬುದು ತಿಳಿಯಿತು.

ಕೊಲೆಯ ಭೀಕರತೆ ಯಾವ ರೀತಿ ಇತ್ತು ಎಂದರೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಕೊಚ್ಚಲಾಗಿತ್ತು. ಎದೆಯ ಭಾಗದ ಚರ್ಮವನ್ನು ಸುಲಿಯಲಾಗಿತ್ತು. ದೇಹವನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು. ತಲೆಯನ್ನು ಹೆಲ್ಮೆಟ್‌ನೊಳಗೆ ತುರುಕಿಸಿ, ಗೋಣಿಚೀಲದಲ್ಲಿ ತುಂಬಿಸಿಡಲಾಗಿತ್ತು. ಕೈಕಾಲು ಹೊರತಾದ ಭಾಗವನ್ನು ನಂದಿಗುಡ್ಡೆ ಬಳಿ ಎಸೆಯಲಾಗಿತ್ತು. ಕಾಲುಗಳು ಹಾಗೂ ಕೈಗಳು ಇನ್ನೂ ಪತ್ತೆಯಾಗಿಲ್ಲ.

ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು ತಲೆ, ದೇಹದ ಭಾಗಗಳನ್ನು ವಿವಿಧೆಡೆ ಎಸೆದಿರುವ ಭೀಭತ್ಸ ಘಟನೆ ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆದಿದೆ. ಪ್ರಾಥಮಿಕ ತನಿಖೆ ಕೊಲೆಯ ಹಿಂದಿನ ಕೆಲವು ವೈಯಕ್ತಿಕ ಕಾರಣಗಳನ್ನು ಸೂಚಿಸುತ್ತದೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ರವಿವಾರ ರಾತ್ರಿ ವರೆಗೂ ಆರೋಪಿಯ ಪತ್ತೆಯಾಗಿಲ್ಲ ಮತ್ತು ಕೃತ್ಯಕ್ಕೆ ಕಾರಣವೂ ತಿಳಿದುಬಂದಿಲ್ಲ. ಮಹಿಳೆ ವಿಚ್ಚೇದಿತೆಯಾಗಿದ್ದು, ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಕದ್ರಿ ಪಾರ್ಕ್‌ ಹಿಂಬದಿಯ ಅಂಗಡಿ ಬಳಿ ಹೆಲ್ಮೆಟ್‌ ಇರಿಸಿ ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಿಂದಾಗಿ ಬೇರೆ ಕಡೆ ಕೊಲೆ ನಡೆಸಿದ ಬಳಿಕ ದೇಹದ ಅಂಗಾಂಗಗಳನ್ನು ಗೋಣಿಯಲ್ಲಿರಿಸಿ ದ್ವಿಚಕ್ರ ವಾಹನದಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಕೃತ್ಯದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ನಗರದ ಸಿಸಿಕೆಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಮೊದಲ ಪತಿಯಿಂದ ವಿಚ್ಛೇದನ: ಸೋದರತ್ತೆ (ತಂದೆಯ ಅಕ್ಕ) ಜತೆ ವಾಸಿಸುತ್ತಿದ್ದ ಶ್ರೀಮತಿ ಶೆಟ್ಟಿ 4 ವರ್ಷಗಳ ಹಿಂದೆ ಅಮರ್‌ ಆಳ್ವ ಲೇನ್‌ನಲ್ಲಿ ಸ್ವಂತ ಮನೆ ಕಟ್ಟಿಸಿದ್ದರು. 14 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. 2 ವರ್ಷ ಹಿಂದೆ ದೂರದ ಸಂಬಂಧಿ ಮಡಿಕೇರಿ ಮೂಲದ ಸುದೀಪ್‌ ಅವರನ್ನು 2ನೇ ಮದುವೆ ಯಾಗಿದ್ದರು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಕೆಲವು ಸಮಯದ ಬಳಿಕ ಆತನ ನಡತೆ ಸರಿಯಿಲ್ಲದ ಕಾರಣ ಆತನಿಂದಲೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಸುದೀಪ್‌ ಕಳವು ಪ್ರಕರಣವೊಂದರಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.