ಕರಾವಳಿ

ದಾರಿ ಕೇಳುವ ನೆಪದಲ್ಲಿ ಪಾದಾಚಾರಿ ಮಹಿಳೆಯ ದರೋಡೆ : ಸೊತ್ತು ಸಹಿತಾ ಇಬ್ಬರ ಬಂಧನ

Pinterest LinkedIn Tumblr

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಬಳಿ ಪಾದಾಚಾರಿ ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಲಶೇಖರದ ನಿಡ್ಡೇಲ್ ಗೋಕರ್ಣ ನಿವಾಸಿಗಳಾದ ಹರ್ಷಿತ್ ಶೆಟ್ಟಿ @ ಹರ್ಷಿತ್ (25) ಹಾಗೂ ಹವಿತ್ ಪೂಜಾರಿ (24) ಎಂದು ಗುರುತಿಸಲಾಗಿದೆ.

ಆರೋಪಿಗಳು ದಿನಾಂಕ: 22-04-2019 ರಂದು ಮಧ್ಯಾಹ್ನ ಆಂಜೆಲೋರ್ ಚರ್ಚ್ ನ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಸಮಯ ದಾರಿ ಕೇಳುವ ನೆಪದಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿ ಮಣಿ ಸರವನ್ನು ದರೋಡೆ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲಿನೊಂದಿಗೆ ಶುಕ್ರವಾರ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಜಂಕ್ಷನ್ ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳು ದರೋಡೆ ಮಾಡಿದ ರೂ. 50,000/- ಮೌಲ್ಯದ ಚಿನ್ನದ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ರೂ. 60,000/- ಮೌಲ್ಯದ ಮೋಟಾರ್ ಸೈಕಲ್ ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ ರೂ. 1,10,000/- ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಹರ್ಷಿತ್ ಶೆಟ್ಟಿ ಎಂಬಾತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಹಾಗೂ ದರೋಡೆಗೆ ಯತ್ನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೊರ್ವ ಆರೋಪಿ ಹವಿತ್ ಪೂಜಾರಿ ಎಂಬಾತನ ವಿರುದ್ದ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿಗಳಾದ ಹರ್ಷಿತ್ ಶೆಟ್ಟಿ ಮತ್ತು ಹವಿತ್ ಪೂಜಾರಿ ಎಂಬವರುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ (ಐ.ಪಿ.ಎಸ್), ಉಪ-ಪೊಲೀಸ್ ಆಯುಕ್ತರಾದ ಹನುಮಂತರಾಯ (ಐ.ಪಿ.ಎಸ್), ಲಕ್ಷ್ಮೀ ಗಣೇಶ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್., ಪ್ರೊ. ಪಿ.ಎಸ್.ಐ. ಸುದೀಪ್ ಹಾಗೂ ಸಿಬ್ಬಂದಿಗಳಾದ ಸಂತೋಷ್, ಮದನ್, ವಿನೋದ್, ರಾಜೇಶ್, ಸತೀಶ್, ನೂತನ್, ಸಂದೀಪ್, ಭರಣಿ ದೀಕ್ಷಿತ್, ಕಾರ್ತಿಕ್, ಜೀವನ್ ಮತ್ತು ಮೇಘರಾಜ್ ಮುಂತಾದವರು ಪಾಲ್ಗೊಂಡಿದ್ದರು.

Comments are closed.