ಕರಾವಳಿ

ಮದೀನಾ ಆಸ್ಪತ್ರೆಗೆ ಬೇಟಿ ನೀಡಿ ಅಪಘಾತದ ಗಾಯಾಳು ಶಂಕರ್‌‌ರಿಗೆ ಸಾಂತ್ವಾನ ಹೇಳಿದ ಸಚಿವ ಖಾದರ್

Pinterest LinkedIn Tumblr

ಮಂಗಳೂರು : ಮಕ್ಕಾ ಹಾಗೂ ಮದೀನಾ ಝಿಯಾರತ್ ಗಾಗಿ ಕುಟುಂಬ ಸಮೇತ ತೆರಳಿರುವ ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಮದೀನಾದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ವಾಹನ ಅಪಘಾತದಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಮಿಳ್ನಾಡಿನ ನಾಗರಕೊಯಿಲ್ ನಿವಾಸಿ, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶಂಕರ್ ಅವರನ್ನು ಶುಕ್ರವಾರ ಭೇಟಿಯಾಗಿ ಸಾಂತ್ವಾನ ಹೇಳಿದರು.

ಕಂಪೆನಿಯ ಕೆಲಸದ ನಿಮಿತ್ತ ಶಂಕರ್ ಅವರು ಜಿದ್ದಾದಿಂದ ಹಫರುಲ್ ಬಾತಿನ್ ಎಂಬಲ್ಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮದೀನಾದ ಬನಿಮುಹಯ್ಯ ಎಂಬಲ್ಲಿ ಅಪಘಾತಕ್ಕೊಳಗಾಯಿತು. ಶಂಕರ್ ತಾತ್ಕಾಲಿಕ ವೀಸಾದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸೌದಿ ಅರೇಬಿಯಾಕ್ಕೆ ಬಂದಿದ್ದರು.

ಕಾರು ಅಪಘಾತದಿಂದ ಕಾರಿನಲ್ಲಿದ್ದ ಪಾಕಿಸ್ಥಾನಿ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಂಕರ್ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದರೆ ಜೊತೆಯಲ್ಲಿದ್ದ ಮೋಹನ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಶಂಕರ್ ಅವರ ಶುಶ್ರೂಷೆಯ ಮೇಲುಸ್ತುವಾರಿಯನ್ನು ಕರ್ನಾಟಕದ ಕೆ.ಸಿ.ಎಫ್. (ಕರ್ನಾಟಕ ಕಲ್ಚರಲ್ ಫೌಂಡೇಶನ್) ತಂಡ ವಹಿಸಿತ್ತು. ಕನ್ನಡಿಗರು ಮಾತ್ರ ಇರುವ ಈ ಸಂಸ್ಥೆಯು ಸೌದಿ ಅರೇಬಿಯಾದಲ್ಲಿ ಜಾತಿ ಮತ ಬೇಧವಿಲ್ಲದೇ ಕೆಲಸ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ.

ಆಸ್ಪತ್ರೆ ಭೇಟಿ ಸಂದರ್ಭ ಸಚಿವ ಯು.ಟಿ.ಖಾದರ್ ಜೊತೆ ಜುಬೈಲ್ ಅಮಾಕೋ ಗ್ರೂಪ್ ಸಿಇಓ ಆಸಿಫ್ ಅಮಾಕೋ, ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಸಾಂತ್ವಾನ ವಿಭಾಗದ ಪ್ರಮಖರಾದ ತಾಜುದ್ದೀನ್ ಸುಳ್ಯ, ರಝಾಕ್ ಉಳ್ಳಾಲ್, ಜಬ್ಬಾರ್ ಕಾವಳಕಟ್ಟೆ, ಹುಸೈನಾರ್ ಮಾಪಲ್, ಅಶ್ರಫ್ ಸಖಾಫಿ ನೂಜಿ, ಆಸಿಫ್ ಬದ್ಯಾರ್, ಹಮೀದ್ ಕಲ್ಲರ್ಬೆ ಮೊದಲಾದವರಿದ್ದರು.

Comments are closed.