ನವದೆಹಲಿ: ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಕಂಪೆನಿಯಾದ ಅಮೆರಿಕದ ಬೋಯಿಂಗ್ ನಿಂದ 22 ಅಪಾಚೆ ಎಎಚ್-64ಡಿ ದಾಳಿಯ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ. ಮೂರೂವರೆ ವರ್ಷಗಳ ಹಿಂದೆಯೇ ಭಾರತ ಮತ್ತು ಅಮೆರಿಕಾ ಮಧ್ಯೆ ಈ ಬಹುಶತಕೋಟಿ ಹೆಲಿಕಾಪ್ಟರ್ ಖರೀದಿ ಮತ್ತು ಮಾರಾಟ ಒಪ್ಪಂದವಾಗಿತ್ತು.
ಅಮೆರಿಕಾದ ಎಎಚ್-64 ಇ(1) ಅಪಚೆ ಹೆಲಿಕಾಪ್ಟರ್ ಭಾರತೀಯ ವಾಯುಪಡೆಗೆ ಸೇರ್ಪಡೆಯಿಂದ ಭಾರತದ ಯುದ್ಧವಿಮಾನ ಪಡೆಯ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಭವಿಷ್ಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ಹೆಲಿಕಾಪ್ಟರ್ ನ್ನು ವಿನ್ಯಾಸಗೊಳಿಸಲಾಗಿದ್ದು ಪರ್ವತ, ಕಣಿವೆಗಳಲ್ಲಿ ಸಹ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಮೊದಲ ಎಎಚ್-64ಇ(1) ಅಪಚೆ ಗಾರ್ಡಿಯನ್ ಹೆಲಿಕಾಪ್ಟರ್ ನ್ನು ಭಾರತೀಯ ವಾಯುಪಡೆಗೆ ಔಪಚಾರಿಕವಾಗಿ ಅಮೆರಿಕಾದ ಬೋಯಿಂಗ್ ಉತ್ಪಾದನಾ ಕೇಂದ್ರವಾದ ಮೆಸಾ, ಅರಿಜೊನಾದಲ್ಲಿ ನಿನ್ನೆ ಹಸ್ತಾಂತರಿಸಲಾಯಿತು ಎಂದು ಭಾರತೀಯ ವಾಯುಪಡೆ ವಕ್ತಾರ ಗ್ರೂಪ್ ಕಾಪ್ಟನ್ ಅನುಪಮ್ ಬ್ಯಾನರ್ಜಿ ತಿಳಿಸಿದ್ದಾರೆ.
ಎಎಚ್-64ಇ ಅಪಚೆ ಪ್ರಮುಖ ಬಹುಬಳಕೆಯ ಯುದ್ಧ ಹೆಲಿಕಾಪ್ಟರ್ ಆಗಿದ್ದು ಅದನ್ನು ಅಮೆರಿಕಾ ಸೇನೆ ಬಳಸಿಕೊಂಡಿದೆ. ಭಾರತೀಯ ವಾಯುಪಡೆ ಬಹುಶತಕೋಟಿ ಡಾಲರ್ ಮೊತ್ತದ 22 ಅಪಚೆ ಹೆಲಿಕಾಪ್ಟರ್ ಖರೀದಿಗೆ 2015ರ ಸೆಪ್ಟೆಂಬರ್ ನಲ್ಲಿ ಅಮೆರಿಕಾ ಸರ್ಕಾರ ಮತ್ತು ಬೋಯಿಂಗ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು.
ಹೆಲಿಕಾಪ್ಟರ್ ನ ಮೊದಲ ತಂಡ ಭಾರತಕ್ಕೆ ಈ ವರ್ಷ ಜುಲೈಯಲ್ಲಿ ಬಂದಿಳಿಯಲಿದೆ. ಆಯ್ದ ವಿಮಾನಯಾನ ಸಿಬ್ಬಂದಿ ಮತ್ತು ಭೂ ಸಿಬ್ಬಂದಿಗೆ ಅಮೆರಿಕಾದ ಸೇನಾ ನೆಲೆ ಫೋರ್ಟ್ ರುಖೆರ್, ಅಲಬಾಮಾದಲ್ಲಿ ತರಬೇತಿ ನೀಡಲಾಗಿದ್ದು ಈ ಸಿಬ್ಬಂದಿಗಳು ಹೆಲಿಕಾಪ್ಟರ್ ನ ಕಾರ್ಯಾಚರಣೆ ಮಾಡಲಿದ್ದಾರೆ. ಇದರಿಂದ ಭಾರತ-ಅಮೆರಿಕಾ ನಡುವಣ ರಕ್ಷಣಾ ಸಹಕಾರವನ್ನು ವೃದ್ಧಿಯಾಗಲಿದೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.