ಕ್ಯಾ. ಗಣೇಶ್ ಕಾರ್ಣಿಕ್ ಪ್ರಮೋದ್ ಮಧ್ವರಾಜ್
ಮಂಗಳೂರು : ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಮೀನುಗಾರರ ಸಹಿತ ನಾಪತ್ತೆಯಾದ ಸುವರ್ಣ ತ್ರಿಭುಜ ದೋಣಿ ಹಲವು ತಿಂಗಳುಗಳ ಬಳಿಕ ನೌಕಪಡೆಯ ನಿರಂತರ ಹುಡುಕಾಟದ ನಂತರ ದೋಣಿಯ ಅವಶೇಷ ಮಹಾರಾಷ್ಟ್ರದ ಮಾಲ್ವಾಣ್ ಬಳಿ ಆಳ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ನೌಕಪಡೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಬೋಟಿನಲ್ಲಿದ್ದ ಮೀನುಗಾರರ ಮಾಹಿತಿ ಇನ್ನೂ ದೊರಕಿರುವುದಿಲ್ಲ.
ನಾಪತ್ತೆಯಾದ ದೋಣಿಯ ಅವಶೇಷಗಳು ಆಳ ಸಮುದ್ರದಲ್ಲಿ ಪತ್ತೆಯಾಗಿರುವ ಬಗ್ಗೆ ನೌಕಪಡೆ ಖಚಿತಪಡಿಸುತ್ತಿದ್ದಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರವರು ನೌಕಪಡೆಯೇ ಮೀನುಗಾರರ ಕಗ್ಗೊಲೆ ಮಾಡಿದೆ ಎಂಬುದಾಗಿ ನೇರವಾಗಿ ಭಾರತೀಯ ನೌಕಪಡೆಯ ಮೇಲೆ ಕೊಲೆ ಆರೋಪವನ್ನು ಮಾಡಿರುವುದು ಭಾರತೀಯ ಸೇನೆಗೆ ಮಾಡಿದ ಅವಮಾನ ಹಾಗೂ ಸರ್ವತಾ ಆಕ್ಷೇಪಣೀಯ. ಅವರ ಈ ರೀತಿಯ ಕೀಳು ಮಟ್ಟದ ಹೇಳಿಕೆಯನ್ನು ಅತ್ಯಂತ ಕಟು ಶಬ್ದಗಳಿಂದ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್್ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ದೇಶದಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದಾಗ ತಮ್ಮ ಜೀವವನ್ನೆ ಪಣವಾಗಿಟ್ಟುಕೊಂಡು ಕೆಲಸಮಾಡುವ ಸೈನ್ಯದ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡುವುದು ಮಾಧ್ವರಾಜ್ ಅವರ ವ್ಯಕ್ತಿತ್ವಕ್ಕೆ ಶೋಭೆತರುವಂತದಲ್ಲ. ಇನ್ನು ಭಾರತೀಯ ನೌಕ ಪಡೆಯು ಸುವರ್ಣ ತ್ರಿಭುಜ ನಾಪತ್ತೆಯಾದ ಮಾಹಿತಿ ದೊರೆತ ದಿನದಿಂದ ನಿರಂತರವಾಗಿ ಸಮುದ್ರದಲ್ಲಿ ಹುಡುಕಾಟನಡೆಸಿದ್ದು ಇದಕ್ಕಾಗಿ ಕೇಂದ್ರದ ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ವಿಶೇಷವಾದ ಮುತುವರ್ಜಿಯನ್ನು ವಹಿಸಿ ತಮ್ಮ ಇಲಾಖೆಯ ಮೂಲಕ ಶೋಧ ಕಾರ್ಯಕ್ಕೆ ಹೆಚ್ಚಿನ ಸಹಕಾರವನ್ನು ನೀಡಿರುವುದು ತಮ್ಮ ಕರ್ತವ್ಯ ಮತ್ತು ಮಾನವೀಯ ದೃಷ್ಠಿಯಿಂದಲೇ ಹೊರತು ಕೇವಲ ಮತ ರಾಜಕಾರಣಕ್ಕಾಗಿ ಅಲ್ಲ ಎಂಬುದನ್ನು ಅವರು ತಿಳಿದುಕೊಂಡರೆ ಉತ್ತಮ.
ಪ್ರಮೋದ್ ಮಧ್ವರಾಜ್ ತಮ್ಮ ಚುನಾವಣಾ ಸೋಲಿನ ಭೀತಿಯಿಂದ ಹತಾಶರಾಗಿದ್ದು ಕೈಲಾಗದವ ಮೈ ಪರಚಿಕೊಂಡ ಎಂಬಂತೆ ತಮ್ಮ ಪಕ್ಷದ ಇತರ ನಾಯಕರುಗಳ ರೀತಿ ಇಡೀ ದೇಶದ ಜನತೆ ಅತ್ಯಂತ ಹೆಚ್ಚು ಗೌರವಿಸುವ ಸೇನೆಯ ಮೇಲೆ ಈ ರೀತಿ ಆದಾರ ರಹಿತ ನಿರ್ಲಜ್ಜ ಅಪಾದನೆಮಾಡಿರುವುದು ಸರ್ವತಾ ಖಂಡನೀಯ. ಸೈನಿಕರ ತ್ಯಾಗ ಬಲಿದಾನ ಹಾಗೂ ದೇಶ ಸೇವೆಯ ಬಗ್ಗೆ ಕಿಂಚಿತ್ತಾದರು ಗೌರವವಿದ್ದಲ್ಲಿ ಮಧ್ವರಾಜ್ ಅವರು ಜನತೆಯ ಕ್ಷಮೆಯಾಚಿಸಬೇಕು ಎಂದು ಮಾಜಿ ಸೈನಿಕನ ನೆಲೆಯಲ್ಲಿ ಆಗ್ರಹಿಸುವುದಾಗಿ ಕಾರ್ಣಿಕ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.