ರಾಷ್ಟ್ರೀಯ

ದೆಹಲಿಯಲ್ಲಿ ರೋಡ್​ ಶೋ ನಡೆಸುತ್ತಿದ್ದ ವೇಳೆ ಸಿಎಂ ಅರವಿಂದ್​​ ಕೇಜ್ರಿವಾಲ್​​ಗೆ ಕಪಾಳ ಮೋಕ್ಷ

Pinterest LinkedIn Tumblr

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ದೆಹಲಿಯಲ್ಲಿ ರೋಡ್​ ಶೋ ನಡೆಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ಸಿಎಂ ಅರವಿಂದ್​​ ಕೇಜ್ರಿವಾಲ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಇಲ್ಲಿನ ಮೋತಿ ನಗರ ಪ್ರದೇಶದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಕೇಜ್ರಿವಾಲ್‌ಗೆ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದಾನೆ.

ವ್ಯಕ್ತಿ ಹಲ್ಲೆ ಮಾಡುತ್ತಿದ್ದಂತೆಯೇ ಗಾಬರಿಗೊಂಡ ಕೇಜ್ರಿವಾಲ್‌ ಹಿಂದೆ ಸರಿದಿದ್ದಾರೆ. ಅಲ್ಲಿಯೇ ಸೇರಿದ್ದ ಬೆಂಬಲಿಗರು ತಕ್ಷಣವೇ ಕೇಜ್ರಿವಾಲ್ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೇ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಂಪು ಅಂಗಿ ಧರಿಸಿದ್ದ ವ್ಯಕ್ತಿ ಮತ್ತೆ ಕೇಜ್ರಿವಾಲ್ ಮೇಲೆ ಹಲ್ಲೆಗೆ ಮುಂದಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಜತೆಗೆ ಈ ವ್ಯಕ್ತಿ ಯಾರು? ಯಾವ ಕಾರಣಕ್ಕೆ ಕಪಾಳ ಮೋಕ್ಷ ಮಾಡಿದ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಸಿಎಂ ಅರವಿಂದ್​​ ಕೇಜ್ರಿವಾಲ್‌ ಅವರ ಮೇಲೆ ಈ ಹಿಂದೆಯೂ ಹಲವು ಬಾರಿ ಹಲ್ಲೆ ನಡೆದಿವೆ. ಒಮ್ಮೆ 2018 ನವೆಂಬರ್​​ನಲ್ಲಿ ತಮ್ಮ ಕಚೇರಿ ಬಳಿಯೇ ಖಾರದ ಪುಡಿ ಎರಚಿದ್ದ. ಇನ್ನೊಮ್ಮೆ ವಾಯು ಮಾಲಿನ್ಯ ತಗ್ಗಿಸಲು ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ನಿಯಮ ರೂಪಿಸಿದ್ದ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬ ಶೂ ಕೂಡ ಎಸೆದಿದ್ದ ಎಂಬುದು ಹಳೆಯ ಇತಿಹಾಸ.

ಹಾಗೆಯೇ ಛತ್ರಸಾಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ವಂದನಾರ್ಪಣೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕೇಜ್ರಿವಾಲ್‌ ಅವರ ಮೇಲೆ ಶಾಹಿ ಎರಚಿದ್ದರು. 2014ರಲ್ಲಿಯೂ ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಆಟೋರಿಕ್ಷಾ ಚಾಲಕ ಕೇಜ್ರಿವಾಲ್‌ ಅವರ ಕಪಾಳಕ್ಕೆ ಹೊಡೆದಿದ್ದ ಎನ್ನಲಾಗಿದೆ.

Comments are closed.