ಕರಾವಳಿ

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು

Pinterest LinkedIn Tumblr

File Photo

ಮಂಗಳೂರು, ಮೇ 03: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸೆಸ್ಸೆಲ್ಸಿ ಪರೀಕ್ಷೆ ಬರೆದ 617 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇ.100 ಫಲಿತಾಂಶ ದಾಖಲಿಸಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯ 41 ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದ್ದು, ಈ ಪೈಕಿ 34 ಶಾಲೆಗಳ 617 ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು, ಈ ಪೈಕಿ 63 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ತುಳುವಿನಲ್ಲಿ ಉತ್ತಮ ಸಾಧನೆ ದಾಖಲಿಸುವ ಮೂಲಕ ಶಾಲೆಗಳ ಫಲಿತಾಂಶ ಹಾಗೂ ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬರುತ್ತದೆ. ಮುಂದಿನ ವರ್ಷಗಳಲ್ಲಿ ತುಳು ಪಠ್ಯ ಭೋದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತಿದೆ ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ ಭಂಡಾರಿ ತಿಳಿಸಿದ್ದಾರೆ.

ಇದಕ್ಕೆ ಕಾರಣರಾದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ತುಳು ಭಾಷಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನಾರ್ಹರು. ಎಂದು ಹೇಳಿರುವ ಅಧ್ಯಕ್ಷರು ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಾಲೆಗಳ ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

Comments are closed.