ಕರಾವಳಿ

ಮಂಗಳೂರು ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ : ರೂ.1,87,000 ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ನಲ್ಲಿರುವ ಅದ್ವೈತ್ ಜೆ.ಸಿ.ಬಿ. ಮತ್ತು ಯುನೈಟೆಡ್ ಟೊಯೋಟಾ ಶೋರೂಮ್ ಗೆ ನುಗ್ಗಿ ರಾತ್ರಿ ವೇಳೆ ಕಳ್ಳತನ ಮಾಡಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಬಿದ್ರೆಯ ಬೊಗ್ರಗುಡ್ಡೆ ನಿವಾಸಿ ಪ್ರಸಾದ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಜಂಕ್ಷನ್ ನಲ್ಲಿ ಎಪ್ರಿಲ್ 2ರಂದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಸಾದ್ ಪೂಜಾರಿ ಎಂಬಾತನ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಹಾಗೂ ರಾತ್ರಿ ಕನ್ನ ಕಳವು ನಂತಹ ಒಟ್ಟು 03 ಪ್ರಕರಣಗಳು ದಾಖಲಾಗಿದ್ದು, 2014 ನೇ ಸಾಲಿನಲ್ಲಿ ಆರೋಪಿಗೆ ರಾತ್ರಿ ಕನ್ನ ಕಳವು ಪ್ರಕರಣದಲ್ಲಿ ಪ್ರಕರಣ ಸಾಬೀತಾಗಿ ಶಿಕ್ಷೆಯಾಗಿರುತ್ತದೆ. ವೇಣೂರು ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನ ಕಳವು ಪ್ರಕರಣವು ದಾಖಲಾಗಿರುತ್ತದೆ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆಯತ್ನದಂತಹ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಆರೋಪಿ ಪ್ರಸಾದ್ ಪೂಜಾರಿ ಎಂಬಾತನನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ರೈಲ್ವೆ ಜಂಕ್ಷನ್ ಬಳಿಯಿರುವ ರೈಲ್ವೆ ವಸತಿ ಗೃಹಕ್ಕೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ಪಡೀಲ್ ಎಂಬಲ್ಲಿರುವ ಅದ್ವೈತ್ ಜೆ.ಸಿ.ಬಿ. ಶೋರೂಮ್ ಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ಪಡೀಲ್ ಎಂಬಲ್ಲಿರುವ ಯುನೈಟೆಡ್ ಟೊಯೋಟಾ ಶೋರೂಮ್ ಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 02 ಅಂಗಡಿಗಳಿಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಒಟ್ಟು 02 ಪ್ರಕರಣ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಡಪದವು ಪಂಚಾಯತ್ ಕಛೇರಿಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿರುವ ಚೌಟಾಸ್ ಗ್ಯಾಸ್ ಏಜೆನ್ಸಿಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 07 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿದೆ.

ಆರೋಪಿ ಪ್ರಸಾದ್ ಪೂಜಾರಿ ಎಂಬಾತನು ಒಟ್ಟು 07 ಕಡೆಗಳಲ್ಲಿ ಕಳ್ಳತನ ಮಾಡಿದ್ದ ಸೊತ್ತುಗಳಲ್ಲಿ 03 ಲ್ಯಾಪ್ ಟಾಪ್, 04 ಟ್ಯಾಬ್, 03 ಮೊಬೈಲ್, 02 ಚಿನ್ನದ ಬಳೆಗಳು, ಕ್ಯಾಶ್ ಲಾಕರ್, 01 ಕ್ಯಾಮೆರಾ ಹಾಗೂ ಕೃತ್ಯ ನಡೆಸಲು ಉಪಯೋಗಿಸಿದ ಲಿವರ್, ಟಾರ್ಚ್, ಮಾಸ್ಕ್ ಹಾಗೂ ಕಬ್ಬಿಣದ ರಾಡ್ ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ ರೂ. 1,87,000/- ಆಗಿರುತ್ತದೆ. ಆರೋಪಿ ಪ್ರಸಾದ್ ಪೂಜಾರಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್. ಉಪ-ಪೊಲೀಸ್ ಆಯುಕ್ತರಾದ ಹನುಮಂತರಾಯ (ಐ.ಪಿ.ಎಸ್), ಲಕ್ಷ್ಮೀ ಗಣೇಶ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ಪ್ರೊ.ಪಿ.ಎಸ್. ಐ ಸುದೀಪ್ ಹಾಗೂ ಸಿಬ್ಬಂದಿಗಳಾದ ಸಂತೋಷ್, ಮದನ್, ವಿನೋದ್, ರಾಜೇಶ್, ನೂತನ್, ಸಂದೀಪ್, ಕಾರ್ತಿಕ್ ಮತ್ತು ಮೇಘರಾಜ್ ಮುಂತಾದವರು ಪಾಲ್ಗೊಂಡಿದ್ದರು.

Comments are closed.