ಕರಾವಳಿ

ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ?.. ಮೀನುಗಾರರು ನಾಪತ್ತೆ

Pinterest LinkedIn Tumblr

ಮಹಾರಾಷ್ಟ್ರ / ಕಾರವಾರ, ಮೇ 03: ಉಡುಪಿಯ ಮಲ್ಪೆ ಬಂದರ್‌ನಿಂದ ಮೀನುಗಾರಿಕೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಎಂಬ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಬಳಿ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ನೌಕಪಡೆಯ ವಕ್ತಾರರು ತಿಳಿಸಿರುವ ಬಗ್ಗೆ ವರದಿಯಾಗಿದೆ.

ನಾಲ್ಕೂವರೆ ತಿಂಗಳ ಹಿಂದೆ ಏಳು ಮೀನುಗಾರರೊಂದಿಗೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳನ್ನು ಐಎನ್‌ಎಸ್ ನಿರೀಕ್ಷಕ್ ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ನೌಕಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.

ಕಳೆದ ಡಿಸೆಂಬರ್ 15ರಂದು ಮಲ್ಪೆಯ ಬಂದರ್‌ನಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್‌ನಲ್ಲಿ ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಸಮುದ್ರದ ಸುಮಾರು 60-70 ಮೀಟರ್ ಆಳದಲ್ಲಿ ಬೋಟಿನ ಅವಶೇಷಗಳನ್ನು ನೌಕಪಡೆಯ ಹೆಲಿಕಾಪ್ಟರ್‌ಗಳು, ಹಡಗುಗಳು ನಿರಂತರ ಶೋಧ ನಡೆಸಿ ಪತ್ತೆ ಹಚ್ಚಿವೆ ಎಂದು ನೌಕಾಪಡೆ ತಿಳಿಸಿದೆ.

ಐಎನ್‌ಎಸ್ ನಿರೀಕ್ಷಕ್ ಮೇ 1ರಂದು ಕಾರ್ಯಾಚರಣೆಗಿಳಿದ ವೇಳೆ ಈ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗಿದೆ. ಆದರೆ ಬೋಟಿನಲ್ಲಿದ್ದ 7 ಮೀನುಗಾರರು ಇನ್ನೂ ಕೂಡ ಪತ್ತೆಯಾಗದೇ ಇರುವುದರಿಂದ ಮೀನುಗಾರರು ಸಮುದ್ರಪಾಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಪತ್ತೆಯಾದ ಅವಶೇಷಗಳು ಸುವರ್ಣ ತ್ರಿಭುಜ ಬೋಟಿನದಲ್ಲ?..

ಇದೇ ವೇಳೆ ಮಹಾರಾಷ್ಟ್ರದ ಮಾಲ್ವಾನ್ ಬಳಿ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿರುವ ಅವಶೇಷಗಳು ಸುವರ್ಣ ತ್ರಿಭುಜ ಬೋಟಿನದಲ್ಲ. ಬದಲಾಗಿ ಅದು ಬೇರೆ ಯಾವೂದೋ ಬೋಟಿನ ಅವಶೇಷಗಳು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿ ಮೂಲದ ಮೀನುಗಾರರು ಇತ್ತೀಚೆಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ತೆರಳಿದ್ದಾಗ ಮಹಾರಾಷ್ಟ್ರದ ರತ್ನಾಗಿರಿ ವ್ಯಾಪ್ತಿಯ ಸಮುದ್ರದಲ್ಲಿ ತೆಲುತ್ತಿರುವ ಅವಶೇಷಗಳನ್ನು ಗಮನಿಸಿ, ಅದರ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಸುವರ್ಣ ತ್ರಿಭುಜ್ ಬೋಟಿನ ಮೇಲ್ಬಾಗದ ಹೊದಿಕೆಯಂತೆ ಕಂಡುಬಂದಿದೆ ಎಂದು ಬರೆದುಕೊಂಡಿದ್ದಾರೆ.

ಸಮುದ್ರದಲ್ಲಿ ತೇಲುತ್ತಿರುವ ಬೋಟಿನ ಮೇಲ್ಬಾಗದ ಹೊದಿಕೆ ಮೇಲೆ ಎಲ್.ಇ.ಡಿ ಲೈಟ್ ಸೇರಿದಂತೆ ಇನ್ನಿತರ ಪರಿಕರಗಳು ಜೋಡಣೆಯಾಗಿದ್ದು ಅದು ಸುವರ್ಣ ತ್ರಿಭುಜದ್ದೇ ಇರಬಹುದು ಎಂಬ ವಿಚಾರ ಮೀನುಗಾರರ ವಲಯದಲ್ಲಿ ಚರ್ಚೆಯಾಗುತ್ತಿದೆ. ಮಲ್ಪೆಯಿಂದ ಹೊರಟ ಬೋಟ್ ನಾಪತ್ತೆಯಾಗಿ ನಾಲ್ಕೂವರೆ ತಿಂಗಳು ಕಳೆದಿದ್ದು ದಿನಕ್ಕೊಂದು ಉಹಾಪೋಹಗಳು ಹಬ್ಬಿಕೊಂಡಿದೆ. ಆದರೆ ಸತ್ಯಾಂಶವಿನ್ನು ಪತ್ತೆಯಾಗಿಲ್ಲ.

ಸಮುದ್ರದಲ್ಲಿ ತೇಲುತ್ತಿದ್ದ ಅವಶೇಷದ ಬಳಿ ತೆರಳಿದ ಮೀನುಗಾರರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೋಟೊಗಳನ್ನು ತೆಗೆದು ಈ ಬಗ್ಗೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೀನುಗಾರರಿಂದ ಸಂಪೂರ್ಣ ಮಾಹಿತಿ ಪಡೆದಿರುವ ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು ಇದೀಗ ಪತ್ತೆಯಾದ ಅವಶೇಷಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

Comments are closed.