ಕರಾವಳಿ

ಮಂಗಳೂರಿಗರ ಬಗ್ಗೆ ಸಚಿವ ಎಚ್.ಡಿ. ರೇವಣ್ಣ ನೀಡಿರುವ ಹೇಳಿಕೆಗೆ ಸಚಿವ ಖಾದರ್ ಅಸಮಾಧಾನ

Pinterest LinkedIn Tumblr

 

ಮಂಗಳೂರು : ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತು ರಾಜಕೀಯಕ್ಕೆ ತುಲನೆ ಮಾಡಿ ಹೇಳಿಕೆ ನೀಡಿರುವುದಕ್ಕೆ ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೇವಣ್ಣ ಅವರು ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದುದಕ್ಕೆ ಹಾಗೂ ದಕ್ಷಿಣಕನ್ನಡ ಜಿಲ್ಲೆ ಏಳನೇ ಸ್ಥಾನ ಬಂದಿರುವುದಕ್ಕೆ ಪ್ರತಿಕ್ರಿಯಿಸಿ ಮಂಗಳೂರಿಗರು ಬಿಜೆಪಿಗೆ ಓಟು ಹಾಕಿರುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಹಿಂದೆ ಬಿದ್ದಿದ್ದಾರೆಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಸಚಿವ ಯು.ಟಿ.ಖಾದರ್ ಅವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, “ಎಚ್.ಡಿ. ರೇವಣ್ಣ ಅವರು ಹಿರಿಯ ರಾಜಕಾರಣಿ ಮತ್ತು ಮಾರ್ಗದರ್ಶಕರು. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಅವರ ಇಲಾಖೆಯಿಂದ ಅನುದಾನ ಒದಗಿಸಿ ಕೊಡುಗೆ ನೀಡಿದ್ದಾರೆ. ಆದರೆ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಮಂಗಳೂರನ್ನು ಶಿಕ್ಷಣದ ಕಾಶಿ ಎಂದೇ ಬಣ್ಣಿಸಲಾಗುತ್ತದೆ. ಇಲ್ಲಿ ರಾಜ್ಯ, ರಾಷ್ಟ್ರವಲ್ಲದೆ ಹೊರದೇಶದ ವಿದ್ಯಾರ್ಥಿಗಳು ಬಂದು ಕಲಿಯುತ್ತಿದ್ದಾರೆ. ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ.

ಕಳೆದ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದಿದೆ. ಈ ಹಿಂದಿನ ವರ್ಷಗಳಲ್ಲಿ ಶಿಕ್ಷಣದಲ್ಲಿ ನಮ್ಮ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಏಳನೇ ಸ್ಥಾನ ಪಡೆದರೂ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ನಮ್ಮ ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರು ಶ್ರಮವಹಿಸುತ್ತಾರೆ. ಶಿಕ್ಷಣ ಮತ್ತು ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Comments are closed.