ಮಂಗಳೂರು, ಎಪ್ರಿಲ್..23: ಬಿಯರ್ ಬಾಟಲಿಯ ಒಳಗೆ ಬ್ಲೇಡೊಂದು ಪತ್ತೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಿಯರ್ ಖರೀದಿಸಿದ ಗ್ರಾಹಕ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಿದ್ದಾರೆ.
ನಗರದ ಬಿಜೈಯ ರಖಂ ಮದ್ಯ ಮಾರಾಟ ಮಳಿಗೆಯಿಂದ ಶರತ್ ಕುಮಾರ್ ಎಂಬವರು ಸೋಮವಾರ ಖರೀದಿಸಿದ ಟಬೋರ್ಗ್ ಬಿಯರ್‌ನಲ್ಲಿ ಬ್ಲೇಡ್ ಪತ್ತೆಯಾಗಿದೆ.
ಕಾವೂರು ಗಾಂಧಿ ನಗರ ನಿವಾಸಿ ಶರತ್ ಕುಮಾರ್ ಅವರು ಸೋಮವಾರ ರಾತ್ರಿ 8 ಗಂಟೆಗೆ ಬಿಜೈಯ ರಖಂ ಮದ್ಯ ಮಾರಾಟ ಮಳಿಗೆಯಿಂದ ‘ಟುಬೋರ್ಗ್’ ಬ್ರಾಂಡ್‌ನ ನಾಲ್ಕು ಬಾಟಲಿ ಬಿಯರ್ ಖರೀದಿಸಿ ಮನೆಗೆ ಕೊಂಡೊಯ್ದಿದ್ದರು. ಆ ಪೈಕಿ ಒಂದು ಬಾಟಲಿಯಲ್ಲಿದ್ದ ಬಿಯರನ್ನು ಭಾಗಶಃ ಕುಡಿದ ಬಳಿಕ ಅದರ ತಳದಲ್ಲಿ ಬ್ಲೇಡೊಂದು ಪತ್ತೆಯಾಗಿದ್ದು, ತಕ್ಷಣ ಮದ್ಯದ ಅಂಗಡಿಗೆ ತೆರಳಿ ವಿಷಯ ತಿಳಿಸಿದಾಗ ಅವರು ಸರಿಯಾಗಿ ಸ್ಪಂದಿಸದೆ ಇನ್ನೊಂದು ಬಾಟಲಿ ಬಿಯರ್ ಕೊಡಲು ಮುಂದಾದರು ಎನ್ನಲಾಗಿದೆ.
ಆದರೆ ಅಂಗಡಿಯವರಿಂದ ಸಮರ್ಪಕ ಉತ್ತರ ಸಿಗದ ಕಾರಣ ಶರತ್ ಅವರು ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಬಿಯರ್ ಬಾಟಲಿಯಲ್ಲಿ ಬ್ಲೇಡೊಂದು ಪತ್ತೆಯಾದ ಬಗ್ಗೆ ಅಬಕಾರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.