ಕರಾವಳಿ

ರಾಜ್ಯದಲ್ಲೇ ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನ – 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಿ ಹೆಚ್ಚು ಮತದಾನ.. ಇಲ್ಲಿದೆ ವಿವರ

Pinterest LinkedIn Tumblr

ಮಂಗಳೂರು, ಎಪ್ರಿಲ್.18: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ ಏಳು ಗಂಟೆಗೆ ಚುನಾವಣೆ ಆರಂಭಗೊಂಡಿದ್ದು, ಸಂಜೆ ೬ ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದಾಗ ರಾಜ್ಯದಲ್ಲೇ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ.

ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನವಾಗುವ ಮೂಲಕ ಕಳೆದ ಸಾಲಿನ ದಾಖಲೆ ಯನ್ನು ಮುರಿದಿದ್ದು, ರಾಜ್ಯದಲ್ಲೇ ಅತ್ಯಧಿಕ ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಬೆಳ್ತಂಗಡಿಯಲ್ಲಿ ಶೇ.80.92, ಮೂಡಬಿದ್ರೆ ಶೇ.73.17, ಬಂಟ್ವಾಳ ಶೇ. 80.31, ಪುತ್ತೂರು ಶೇ.80.71 ಸುಳ್ಯ ಶೇ.84.10, ಮಂಗಳೂರು ಉತ್ತರ ( ಸುರತ್ಕಲ್) ಶೇ.74.83, ಮಂಗಳೂರು ದಕ್ಷಿಣ ಶೇ. 69.15 ಹಾಗೂ ಮಂಗಳೂರು (ಉಳ್ಳಾಲ) ಶೇ.75.62 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 76.67 ಮತದಾನದೊಂದಿಗೆ ಸಾರ್ವಕಾಲಿಕ ಮತದಾನ ಎಂಬ ಹೆಗ್ಗಳಿಕೆ ಪಡೆದಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 74.46 ಮತದಾನದೊಂದಿಗೆ ಕರ್ನಾಟಕದಲ್ಲೇ ಅತ್ಯಧಿಕ ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆ ಕಾರಣವಾಗಿತ್ತು.

2018 ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 77.63 ಮತದಾನವಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.78 ಮತದಾನವಾಗಿತ್ತು.

ಶಾಂತಿಯುತ ಮತದಾನ :

ಕೆಲವೆಡೆ ಇವಿಎಂಗಳಲ್ಲಿ ದೋಷ, ಸಣ್ಣ ಪುಟ್ಟ ಮಾತಿನ ಚಕಮಕಿ, ವಿವಿ ಪ್ಯಾಟ್‌ಗಳಲ್ಲಿ ಪ್ರಿಂಟರ್ ಸಮಸ್ಯೆ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

1,500 ಪೊಲೀಸರು :

220 ಸೂಕ್ಷ್ಮ ಮತಗಟ್ಟೆಗಳ ಪೈಕಿ 156 ಮತಗಟ್ಟೆಗಳಿಗೆ ಕೇಂದ್ರಿಯ ಪಡೆಗಳ ಭದ್ರತೆ ಕೂಡಾ ಇದ್ದು, ಇನ್ನುಳಿದ ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್‌ವರ್‌ ಮತ್ತು ವೀಡಿಯ ಒಬ್ಸರ್‌ ವರ್‌ರವರ ಕಣ್ಗಾವಲು ಇತ್ತು. ಚುನಾವಣೆ ಬಂದೋಬಸ್ತು ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್ಸ್‌ಪೆಕ್ಟರ್‌ 16, ಪಿಎಸ್‌ಐ 7, ಎಎಸ್‌ಐ 79, ಎಚ್‌ಸಿ/ಪಿಸಿ ಮತ್ತು ಹೋಂಗಾರ್ಡ್‌ ಸಹಿತ ಒಟ್ಟು 1500 ಪೊಲೀಸರು ಹಾಗೂ ಕೇಂದ್ರಿಯ ಪಡೆಯ 2 ಕಂಪನಿ ಮತ್ತು 8 ಕೆಎಸ್‌ಆರ್‌ಪಿ 12 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿತ್ತು..

Comments are closed.