ಕರಾವಳಿ

ಉಡುಪಿಯಲ್ಲಿ ಶಾಂತಿಯುತ ಮತದಾನ; ಹತ್ತು ಹಲವು ವಿಶೇಷಗಳು; 70%ಕ್ಕೂ ಅಧಿಕ ಮತದಾನ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಇಂದು ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆಯಿತು. ಅತೀ ಹೆಚ್ಚು ಬಿಸಿಲಿನ ಕಾರಣ, ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರ ಸರದಿ ಸಾಲು ಕಂಡು ಬಂದಿತ್ತು. ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇಡೀ ಕ್ಷೇತ್ರದಲ್ಲಿ ಉಡುಪಿಯಲ್ಲಿ ಸರಾಸರಿ 78.2%, ಚಿಕ್ಕಮಗಳುರು ಕ್ಷೇತ್ರದಲ್ಲಿ ಸರಾಸರಿ (73%)ಮತದಾನವಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಿದ್ದು, ಪರ್ಕಳ ಶಲೆಯಲ್ಲಿ ಚಂದ್ರಶೇಖರ್ ಭಟ್ ಎಂಬುವವರು ಊರುಗೋಲು ನೆರವಿನಿಂದ ಬಂದು ಮತ ಚಲಾಯಿಸಿದರು. ವೃದ್ದ ಮತದಾರರು ತಮ್ಮ ಮನೆಯವರ ಸಹಾಯದಿಂದ ಬಂದು ಮತ ಚಲಾಯಿಸಿದರು. ಹಲವು ಕಡೆಗಳಲ್ಲಿ ನವ ದಂಪತಿ ಗಳು ಮದುವೆ ವೇಷ ಭೂಷಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಗ್ಗೆ 11 ಗಂಟೆಯ ವೇಳೆಗೆ ಕ್ಷೇತ್ರದಲ್ಲಿ 29.01 % ಮತದಾನವಾಗಿತ್ತು.

ಬೈಲೂರು ನಲ್ಲಿನ ಸಖಿ ಕೇಂದ್ರದಲ್ಲಿ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು, ಮತದಾರರಿಗೆ ಸೂಕ್ತ ನೆರಳಿನ ವ್ಯವಸ್ಥೆ ಮಾಡಲಾಗಿತ್ತು, ಆರೋಗ್ಯ ಇಲಾಖೆ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಉಪಸ್ಥಿತರಿದ್ದರು, ಮಕ್ಕಳಿಗಾಗಿ ನಿರ್ಮಿಸಿದ್ದ ಚಿಣ್ಣರ ಅಂಗಳದಲ್ಲಿ ತಾಯಂದಿರ ಜೊತೆ ಬಂದ ಮಕ್ಕಳು , ವಿವಿಧ ಆಟಿಕೆಗಳೊಂದಿಗೆ ಉತ್ಸಾಹದಿಂದ ಆಡವಾಡುತ್ತಿದ್ದರು.

ನಾಡ್ಪಾಲು ನಲ್ಲಿನ ನಕ್ಸಲ್ ಪೀಡಿತ ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟಯ ವೇಳಗೆ 55% ಕ್ಕೂ ಅಧಿಕ ಮತದಾನವಾಗಿತ್ತು,ಕಾಸನಮಕ್ಕಿ ಶಾಲಾ ಮತಗಟ್ಟೆಗೆ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ನ ಬಿಗಿ ಭದ್ರತೆ ಒದಗಿಸಲಾಗಿತ್ತು,ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯ ಯೋಧರು ಗಸ್ತು ತಿರುಗುತ್ತಾ, ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದರು.
ಸೌಡದಲ್ಲಿನ ಎಥ್ನಿಕ್ ಬೂತ್ ನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು,1140 ಮತದಾರರಿದ್ದ ಇಲ್ಲಿ 1 ಗಂಟೆಯ ವೇಳಗೆ 553 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು, ಇಡೀ ಕ್ಷೇತ್ರದಲ್ಲಿ 1 ಗಂಟೆಯ ವೇಳಗೆ 41% ಮತದಾನವಾಗಿತ್ತು.

ಮಧ್ಯಾಹ್ನ 2 ರಿಂದ 3.30 ರ ವರೆಗೆ ಸ್ವಲ್ಪ ನಿಧಾನಗತಿಯಲ್ಲಿದ್ದ ಮತದಾನ ಪ್ರಮಾಣ 4 ಗಂಟೆಯ ವೇಳೆಗೆ ಬಿಸಿಲು ಕಡಿಮೆಯಾದ ಕಾರಣ ಮತ್ತೆ ಚುರುಕಾಯಿತು. ಮತಗಟ್ಟೆಗಳ ಮುಂದೆ ಜನರ ಸಾಲು ಕಂಡು ಬರತೊಡಗಿತು. ಇಡೀ ಕ್ಷೇತ್ರದಲ್ಲಿ 3 ಗಂಟೆಯ ವೇಳಗೆ 54% ಮತದಾನವಾಗಿತ್ತು.

ಹನುಮಂತನಗರ ಶಾಲೆಯಲ್ಲಿ ಪ್ರಾರಂಭಿಸಿದ್ದ ವಿಕಲಚೇತನ ಮತಗಟ್ಟೆಯಲ್ಲಿ ವಿಕಲಚೇತನ ಮತದಾರರಿಗೆ ಅಗತ್ಯವಿರುವ ವೀಲ್ ಚೇರ್, ಮ್ಯಾಗ್ನಿಫೈಡ್ ಗ್ಲಾಸ್, ಸಹಾಯಕರ ನೆರವು, ಮತಗಟ್ಟೆಗೆ ಕರೆ ತರಲು ಮತ್ತು ಮನೆಗೆ ಬಿಡಲು ವಿಶೇಷ ವಾಹನ ವ್ಯವಸ್ಥೆ, ಊರುಗೋಲುಗಳು, ಅವರಿಗಾಗಿ ಮತದಾನ ಮಾಡಲು ವಿಶೇಷ ಆದ್ಯತೆ, ಮತಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ ಭಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು, 1950 ಸಹಾಯವಾಣಿಯ ಮೂಲಕ ವಿಶೇಷಚೇತನರು, ಅಶಕ್ತ ಹಿರಿಯ ನಾಗರೀಕರು ವಾಹನ ಸೌಲಭ್ಯದ ನೆರವು ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ವಿಕಲಚೇತನ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ವಿಕಲಚೇತನ ಅಧಿಕಾರಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದು, ಮಸ್ಟರಿಂಗ್ ಸಮಯದಲ್ಲಿ ಅವರನ್ನು ಕಾಯಿಸಿದೇ ಅಗತ್ಯ ಪರಿಕರ ನೀಡಿ ಕೂಡಲೇ ಮತಗಟ್ಟೆಗೆ ಪ್ರತ್ಯೇಕ ವಾಹನಗಳಲ್ಲಿ ಕಳುಹಿಸಲಾಗಿತ್ತು , ಡಿ ಮಸ್ಟರಿಂಗ್ ಸಮಯದಲ್ಲಿ ಕೂಡ ಪ್ರತ್ಯೇಕ ವಾಹನದಲ್ಲಿ ಆಗಮಿಸಿ, ಕೂಡಲೇ ಪರಿಕರಗಳನ್ನು ವಾಪಸ್ ಪಡೆದು ಅವರನ್ನು ಮತದಾನ ಕರ್ತವ್ಯದಿಂದ ಬಿಡುಗಡೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ನಿರಂಜನ್ ಭಟ್ ತಿಳಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿದ್ದ 20 ಸಖಿ ಮತಗಟ್ಟೆಗಳಲ್ಲಿ ಮಹಿಳೆಯಲ್ಲಿ ಉತ್ಸಾಹದಿಂದ ಬಂದು ಮತ ಚಲಾಯಿಸಿದರು, ಸಖಿ ಮತಗಟ್ಟೆಯಲ್ಲಿ ಮಹಿಳೆಯರಿಗಾಗಿ ಸೆಲ್ಫಿ ಜೋನ್ ಮಾಡಲಾಗಿತ್ತು, ಜಿಲ್ಲಾಡಳಿತ ಸಿದ್ದಪಡಿಸಿದ್ದ ಮತದಾನ ಜಾಗೃತಿ ಸಾರುವ ವಿಶೇಷ ಕೊಡೆಗಳ ಅಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು , 2 ಅಂಗವಿಕಲ ಮತಗಟ್ಟೆ ಗಳಲ್ಲಿ ವಿಶೇಷಚೇತನರು ಮತಗಟ್ಟೆಗೆ ಬಂದು ಹೋಗಲು ವಾಹನ ವ್ಯವಸ್ಥೆ, ಸಹಾಯಕರ ನೇಮಕ, ಬ್ರೈಲ್ ಮತ ಪತ್ರ ವ್ಯವಸ್ತೆ ಮತ್ತು ವಿಕಲಚೇತನ ವಾತಾವರಣ ನಿರ್ಮಿಸಲಾಗಿತ್ತು ಮತ್ತು 1 ಎಥ್ನಿಕ್ ಬೂಥ್ ಸ್ಥಾಪಿಸಲಾಗಿತ್ತು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Comments are closed.