
ಮುಡಿಪುಃ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ದ.ಕ. ಲೋಕಸಭಾ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮುಡಿಪು ಜಂಕ್ಷನ್ ನಲ್ಲಿ ರವಿವಾರ ಬಿರುಸಿನ ಪ್ರಚಾರ ನಡೆಯಿತು. ಮಂಗಳೂರಿಗೆ ಆಗಮಿಸಿದ ಸಂಸದ ಮತ್ತು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಅವರು ರವಿವಾರ ಕೊಣಾಜೆ ವ್ಯಾಪ್ತಿಯ ಮುಡಿಪು ಪ್ರದೇಶದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.
ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಬಿಜೆಪಿಯ ಸಮಾವೇಶಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಅವರನ್ನು ಮಂಗಳೂರಿಗೆ ಕರೆಸಲಾಗಿತ್ತು. ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ‘ಖಾಮೋಶ್ ‘ ಡೈಲಾಗ್ ಖ್ಯಾತಿಯ ಶತ್ರುಘ್ನ ಸಿನ್ಹಾ ಅವರನ್ನು ಕರೆಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಉದ್ದೇಶ ಕಾಂಗ್ರೆಸ್ ನದ್ದಾಗಿತ್ತು. ಆದರೆ ಆದದ್ದೇ ಬೇರೆ. ಕಾಂಗ್ರೆಸ್ ಪಕ್ಷ ತರಾತುರಿಯಲ್ಲಿ ಮಂಗಳೂರಿನ ಕದ್ರಿ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶಕ್ಕೆ ಜನರೇ ಇಲ್ಲದೇ ಫ್ಲಾಪ್ ಶೋ ಆಗಿದೆ. ಈ ಕಾರ್ಯಕ್ರಮದ ಖಾಲಿ ಕುರ್ಚಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕದ್ರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳ ಇದ್ದಿದ್ದನ್ನು ಮನಗಂಡು ಸಚಿವ ಯು.ಟಿ. ಖಾದರ್ ಅವರು ಶತ್ರುಘ್ನ ಸಿನ್ಹಾ ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಮುಡಿಪುವಿಗೆ ಕರೆದೊಯ್ದಿದ್ದರು. ಅಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರವಾಗಿ ಶತ್ರುಘ್ನ ಸಿನ್ಹಾ ಚುನಾವಣಾ ಪ್ರಚಾರ ನಡೆಸಿದರು.
ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಬಿಜೆಪಿಯು 10 ಸಾವಿರ ಕೋಟಿ ರೂಪಾಯಿ ವೆಚ್ಛ ಮಾಡುತ್ತಿದ್ದಾರೆ. ದೇಶದ ಚೌಕಿದಾರ್ ಎನ್ನುತ್ತಿರುವ ಮೋದಿಯ ಈ ರೀತಿಯ ವೆಚ್ಚವನ್ನು ದೇಶದ ಜನ ಪ್ರಶ್ನಿಸ ಬೇಕಾಗಿದೆ ಎಂದು ಹೇಳಿದರು. ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಿಸ್ಸಿನ ವೃದ್ಧಿಗಾಗಿ ಐದು ವರ್ಷದಲ್ಲಿ 90 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ಆಪಾದಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ನೇತೃತ್ವದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ, ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂ. ಸದಸ್ಯ ಉಸ್ಮಾನ್ ಕರೋಪಾಡಿ, ಬಂಟ್ವಾಳ ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮುಖಂಡರಾದ ಪದ್ಮನಾಭ ನರಿಂಗಾನ, ಉಮರ್ ಪಜೀರ್, ಅಬ್ದುಲ್ ರಝಾಕ್ ಕುಕ್ಕಾಜೆ, ಹೈದರ್ ಕೈರಂಗಳ, ಸಿದ್ದೀಕ್ ಪಾರೆ, ದೇವದಾಸ ಭಂಡಾರಿ, ಸೀತಾರಾಮ ಶೆಟ್ಟಿ, ಸೂಫಿ ಕುಂಞಿ, ಸಮೀರ್ ಪಜೀರ್, ನಾಸೀರ್ ನಡುಪದವು, ಸಿ.ಎಂ. ಶರೀಫ್ ಪಟ್ಟೋರಿ, ಮುರಳೀಧರ್ ಶೆಟ್ಟಿ ಮಾಡೂರು, ಹಸನ್ ಸಾಂಬಾರ್ ತೋಟ, ಲೋಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಮತ್ತೊಮ್ಮೆ ಬರುವ ನಿರ್ಧಾರ ಮಾಡಿದ್ದರೂ ಆಡ್ಡಿಯಾದ ಖಾಲಿ ಕುರ್ಚಿಗಳು:
ಮುಡಿಪು ಕಾರ್ಯಕ್ರಮ ಮುಗಿಸಿ ಕದ್ರಿ ಮೈದಾನಕ್ಕೆ ಬಂದು ಚುನಾವಣಾ ಪ್ರಚಾರ ಸಭೆಯಲ್ಲಿ ಶತ್ರುಘ್ನ ಸಿನ್ಹಾ ಮಾತನಾಡುವವರಿದ್ದರು. ಆದರೆ ರಾತ್ರಿ 8:30 ಕಳೆದರೂ ಕದ್ರಿ ಮೈದಾನದಲ್ಲಿ ಜನ ಸೇರದೆ ಜಾಸ್ತಿ ಖಾಲಿ ಕುರ್ಚಿಗಳೇ ಗಮನ ಸೆಳೆಯುತ್ತಿದ್ದವು.
Comments are closed.