ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ನಡೆಸುವ ಸಲುವಾಗಿ ಕುಂದಾಪುರ ಕ್ಷೇತ್ರ ಬಿಜೆಪಿ ವತಿಯಿಂದ ಸೋಮವಾರ ಸಂಜೆ ನಗರದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ (ರೋಡ್ ಶೋ) ನಡೆಯಿತು.
ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆ ಮೂಲಕ ಮತ ಯಾಚನೆ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಈ ಜಾಥಾವು ನಗರದಲ್ಲಿ ಸಂಚರಿಸಿ ಹೊಸಬಸ್ ನಿಲ್ದಾಣದ ಮೂಲಕ ಪುನಃ ಶಾಸ್ತ್ರಿ ಸರ್ಕಲ್ ಬಳಿ ಬಂದು ಸಮಾಪನಗೊಂಡಿತು. ರೋಡ್ ಶೋ ಕಾರ್ಯಕ್ರಮದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು ಮೋದಿ ಪರ ಘೋಷಣೆ ಮೊಳಗಿತ್ತು.
ಮೋದಿ..ಮೋದಿ…
ಕಾಲ್ನಡಿಗೆ ಜಾಥಾವು ಕುಂದಾಪುರ ಪಾರಿಜಾತ್ ಸರ್ಕಲ್ ಸಮೀಪ ಆಗಮಿಸುತ್ತಿದ್ದಂತೆಯೇ ಜಿ.ಎಸ್.ಬಿ. ಸಮಾಜದ ಓಕುಳಿ ಕಾರ್ಯಕ್ರಮದ ಮೆರವಣಿಗೆಯೂ ಅಲ್ಲಿಗೆ ಬಂದಿದ್ದು ಒಂದೆಡೆ ಬಿಜೆಪಿ ರ್‍ಯಾಲಿ ಮತ್ತೊಂದೆಡೆ ಓಕುಳಿ ರ್‍ಯಾಲಿಯಿತ್ತು. ಅಲ್ಲಿ ನೆರೆದಿದ್ದ ಪುಟಾಣಿಗಳು, ಯುವಕ-ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಮೋದಿ-ಮೋದಿ ಜೈಕಾರ ಕೂಗಿದರು.
ನಿಖಿಲ್ ಎಲ್ಲಿದ್ದೀಯಪ್ಪ?!
ಇನ್ನು ಜಾಥಾ ಸಾಗುತ್ತಿದ್ದ ವೇಳೆ ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರು ‘ನಿಖಿಲ್ ಎಲ್ಲಿದ್ದೀಯಪ್ಪ’ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮುಖಂಡರಾದ ಕಿರಣ್ ಕುಮಾರ್ ಕೊಡ್ಗಿ, ಭಾಸ್ಕರ್ ಬಿಲ್ಲವ, ಸತೀಶ್ ಪೂಜಾರಿ ವಕ್ವಾಡಿ, ಶಂಕರ ಅಂಕದಕಟ್ಟೆ, ಗಣಪತಿ ಟಿ. ಶ್ರೀಯಾನ್, ಸುನೀಲ್ ಶೆಟ್ಟಿ ಹೇರಿಕುದ್ರು, ಸದಾನಂದ ಬಳ್ಕೂರು, ಮಂಜು ಬಿಲ್ಲವ,ಮಹೇಶ್ ಕುಮಾರ್ ಪೂಜಾರಿ, ಮಹಿಳಾ ಮೋರ್ಚಾಅಧ್ಯಕ್ಷೆ ಗುಣರತ್ನಾ, ಜಿ.ಪಂ ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಸುಪ್ರಿತಾ ಉದಯ್, ತಾ.ಪಂ ಸದಸ್ಯೆ ಜಯಶ್ರೀ ಮೊಗವೀರ, ಜ್ಯೋತಿ ಉದಯ್ ಪೂಜಾರಿ, ಪುರಸಭೆ ಸದಸ್ಯರುಗಳು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)