ಕರಾವಳಿ

ಕಂಪ್ಲಿಶನ್ ಸರ್ಟಿಫಿಕೇಟ್ ಹೊಂದಿರದ ಬಾರ್ ಮಾಲಕರ ಕಟ್ಟಡದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ : ಶಾಸಕ ಕಾಮಾತ್ ಆರೋಪ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಿಂದ ಕಂಪ್ಲಿಶನ್ ಸರ್ಟಿಫಿಕೇಟ್ ಪಡೆಯದ ಬಾರ್ ಮಾಲಕರಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣ ಕಚೇರಿಯನ್ನು ತೆರೆಯುವ ಮೂಲಕ ಕಾನೂನು ಉಲ್ಲಂಘಿಸಿರುವುದು ಮಾತ್ರವಲ್ಲದೇ ತನ್ನ ನೈಜ್ಯ ಸಂಸ್ಕೃತಿಯನ್ನು ಜನರ ಮುಂದೆ ಪ್ರದರ್ಶಿಸಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ನಗರದ ಬಂಟ್ಸ್‌ ಹಾಸ್ಟೆಲ್‌ನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬೆಂದೂರ್‌ವೆಲ್‌ನಲ್ಲಿ ‘ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ’ (ಕಂಪ್ಲಿಶನ್ ಸರ್ಟಿಫಿಕೇಟ್) ಪಡೆಯದ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಚುನಾವಣಾ ಕಚೇರಿಯನ್ನು ತೆರೆದಿದೆ. ಬೆಂದೂರ್‌ವೆಲ್‌ನಲ್ಲಿ ಬಾರ್ ಮಾಲಕ ಜೋಕೀಂ ಲೂವಿಸ್ ಪಿಂಟೋ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಕಾಂಗ್ರೆಸ್ ಬಳಸಿಕೊಂಡಿರುವುದು ಕಾಂಗ್ರೆಸ್ ತನ್ನ ನೈಜ ಸಂಸ್ಕೃತಿಯನ್ನು ಜನರ ಮುಂದೆ ತೋರಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣ ಕಚೇರಿ ತೆರೆದಿರುವ ‘ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ.ಮಾತ್ರವಲ್ಲದೇ ಕಟ್ಟಡ ಮಾಲಕರು ‘ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ’ ಪಡೆದಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಈ ಕಟ್ಟಡಕ್ಕೆ ಕಂಪ್ಲಿಶನ್ ಸರ್ಟಿಫಿಕೇಟ್ ಅನ್ನು ಇನ್ನೂ ನೀಡಿಲ್ಲ. ಕಂಪ್ಲಿಶನ್ ಸರ್ಟಿಫಿಕೇಟ್ ಹೊಂದಿರದ ಕಟ್ಟಡದಲ್ಲಿ ಯಾವೂದೇ ಚಟುವಟಿಕೆಗಳನ್ನು ಅಧಿಕೃತವಾಗಿ ಮಾಡುವಂತಿಲ್ಲ. ಆದರೂ ಕಾಂಗ್ರೆಸ್ ತನ್ನ ಚುನಾವಣ ಕಚೇರಿಯನ್ನು ಈ ಕಟ್ಟಡದಲ್ಲಿ ಆರಂಭಿಸುವ ಮೂಲಕ ಕಾನೂನು ಉಲ್ಲಂಘಿಸಿದೆ ಎಂದು ವೇದವ್ಯಾಸ ಕಾಮಾತ್ ಆರೋಪಿಸಿದರು.

ಚುನಾವಣೆ ಮೊದಲೇ ಇಂತಹ ಅಕ್ರಮ ಚಟುವಟಿಕೆ ನಡೆಸುವ ಮಾನಸಿಕತೆಯನ್ನು ಅಭಿವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರ ಕೊಟ್ಟರೆ ಯಾವ ರೀತಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಚಟುವಟಿಕೆ ಮಾಡಬಹುದು ಎಂಬುವುದನ್ನು ನಾಗರೀಕರು ಆರ್ಥಮಾಡಿಕೊಳ್ಳಬಹುದು. ಅಧಿಕಾರ ನೀಡಿದರೆ ಇನ್ನು ಹೆಚ್ಚಿನ ಅಕ್ರಮಗಳನ್ನು ನಡೆಸಲು ಹೊರಟಿರುವ ಕಾಂಗ್ರೆಸ್‌ಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕಿಶೋರ್ ರೈ, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಭಾಸ್ಕರ್‌ ಚಂದ್ರ ಶೆಟ್ಟಿ, ವಸಂತ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Comments are closed.