ಕರಾವಳಿ

ಏಪ್ರಿಲ್.13ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ.. : ಪಕ್ಷದ ಅಭ್ಯರ್ಥಿಗಳ ಪರ ಬ್ಯಾಟಿಂಗ್

Pinterest LinkedIn Tumblr

ಮಂಗಳೂರು : ಕರಾವಳಿಯ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಏಪ್ರಿಲ್.13ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಬರಲಿದ್ದಾರೆ. ಅಂದು ಸಂಜೆ 3.30ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ಕಣ ರಂಗೇರತೊಡಗಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ ತಾರಕಕ್ಕೇರಿದೆ.ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಬಿರುಸುಗೊಂಡಿದೆ. ಈ ನಡುವೆ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್.13ರಂದು ಮಂಗಳೂರಿಗೆ ಆಗಮಿಸಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಎ.8ರಿಂದ ರಾಜ್ಯದ ಆರು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲ್ಲಿದ್ದು, ಎ.8ರಂದು ಚಿತ್ರದುರ್ಗದಲ್ಲಿ ಅದೇ ದಿನ ಮಧ್ಯಾಹ್ನ ಮೈಸೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎ.13ಕ್ಕೆ ಮಂಗಳೂರು, ಅದೇ ದಿನ ಸಂಜೆ ಬೆಂಗಳೂರಿನಲ್ಲಿ, ಎ.18ರಂದು ಚಿಕ್ಕೋಡಿ ಮತ್ತು ರಾಯಚೂರು ಜಿಲ್ಲೆ ಗಂಗಾವತಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಚಾರ ತಂತ್ರಗಾರಿಕೆ ಭಾಗವಾಗಿ ಏಪ್ರಿಲ್ 8ರಿಂದ 14ರವರೆಗೆ ಗ್ರಾಮೀಣ ಸಂವಾದ ಮತ್ತು ನಗರ ಸಂವಾದ ಕಾರ್ಯಕ್ರಮ, ರೋಡ್ ಶೋ ಆಯೋಜಿಸಲಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳ 1861 ಬೂತ್‌ಗಳಲ್ಲಿ ಏಪ್ರಿಲ್ 7 ಮತ್ತು 14ರಂದು ಬಿಜೆಪಿ ಮಹಾ ಸಂಪರ್ಕ ಅಭಿಯಾನ ನಡೆಸಲಿದೆ.

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರು ಸಹಿತ ಪಕ್ಷದ ಎಲ್ಲ ನಾಯಕರು ವಿವಿಧ ಬೂತ್‌ ಮಟ್ಟದಲ್ಲಿ ನಡೆಯುವ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 3ರಿಂದ 5ರವರೆಗೆ ಎಲ್ಲಾ ಬೂತ್‌ಗಳಲ್ಲಿ ಮನೆ ಸಂಪರ್ಕ ನಡೆಯಲಿದೆ. ಏಪ್ರಿಲ್ 7 ಮತ್ತು 14 ರಂದು ನಡೆಯುವ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಒಂದೇ ದಿನದಲ್ಲಿ ಜಿಲ್ಲೆಯ ಎಲ್ಲಾ ಮನೆಗಳನ್ನು ಸಂಪರ್ಕಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರು ಮಾಹಿತಿ ನೀಡಿದ್ದಾರೆ.

Comments are closed.