ಕರಾವಳಿ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಯನ್ನು ಬಂಧಿಸಿದ ಮಣಿಪಾಲ ಪೊಲೀಸರು

Pinterest LinkedIn Tumblr

ಉಡುಪಿ: ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮೂಡುಸಗ್ರಿಯಲ್ಲಿ ಮಾ.9ರಂದು ‌ಸುಮಾರು ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಯಾರೋ ಅಪರಿಚಿತ ವ್ಯಕ್ತಿ ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತೆ ಕೊಲೆ ಪ್ರಕರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಉಡುಪಿ ಎಸ್ಪಿ ನಿಶಾ ಜೇಮ್ಸ್ ‌ಅವರು ಕೊಲೆಯ ತನಿಖೆಗಾಗಿ ಮೂರು ತಂಡಗಳನ್ನು ರಚಿಸಿದ್ದರು.ಪೊಲೀಸರು ತನಿಖೆ ನಡೆಸುತ್ತಿರುವಾಗ 30 ವರ್ಷದ ಕಪ್ಪನೆಯ ವ್ಯಕ್ತಿ ಆ ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯ ಕೆಲವು ನಿಮಿಷಗಳ ಕಾಲ ಮಾತನಾಡಿದ ಬಳಿಕ ಮೂಡುಸಗ್ರಿ ಕಾಡಿಗೆ ಕರೆದುಕೊಂಡು ಹೋದ ಮಾಹಿತಿ ದೊರಕಿತ್ತು. ಆ ಮಾಹಿತಿ ಪ್ರಕಾರ ಸಿಸಿ ಟಿವಿ ದೃಶ್ಯವಾಳಿಯ ಆಧಾರದ ಮೇರೆಗೆ ಮಣಿಪಾಲ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

ನಂತರ ಮಣಿಪಾಲ ಪಿ.ಎಸ್.ಐ ಶ್ರೀಧರ್ ಎಂ.ಪಿ ತಂಡ ಆರೋಪಿಯಾದ ಹನುಮಂತ ಬಸಪ್ಪ ಕಂಬಳಿ (39) ಎನ್ನುವಾತನನ್ನು ಉಡುಪಿ ಬಸ್ ನಿಲ್ದಾಣದ ಬಳಿ ಬಂಧಿಸಲು ಯಶಸ್ವಿಯಾಗಿದ್ದಾರೆ.

ಅತ್ಯಾಚಾರ ನಡೆಸಿ‌ ಕೊಂದ…
ಪ್ರಕರಣದ ತನಿಖೆಯಿಂದ ಆಪಾದಿತನು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸಂತ್ರಸ್ಥೆಯ ಪರಿಚಯವಾಗಿ ಆಕೆಗೆ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಮೂಡುಸಗ್ರಿಯಲ್ಲಿನ ರೈಲು ಹಳಿ ಸಮೀಪದ ನಿರ್ಜನ ಪ್ರದೇಶವಾದ ಹಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಹಾಗೂ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು. ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಬಗ್ಗೆ ವಿಷಯನ್ನು ತನ್ನ ಮನೆಯವರಿಗೆ ಹಾಗೂ ಪೊಲೀಸರಿಗೆ ತಿಳಿಸುವುದಾಗಿ ಹೇಳಿ ಕಿರುಚಾಡಿದಾಗ ಗಾಬರಿಗೊಂಡ ತಾನು ಸಂತ್ರಸ್ಥೆಯ ಕುತ್ತಿಗೆಗೆ ಚೂಡಿದಾರದ ವೇಲನ್ನು ಬಿಗಿದು ಕೊಲೆ ಮಾಡಿ ಪರಾರಿಯಾಗಿರುವುದಾಗಿ ತನಿಖೆ ವೇಳೆ ಆರೋಪಿ‌ ಬಾಯ್ಬಿಟ್ಟಿದ್ದ.

ಕಾರ್ಯಾಚರಣೆ ತಂಡ….
ಈ ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಭಾವಚಿತ್ರ ಮಾತ್ರ ದೊರೆತಿದ್ದು, ಈ ಬಗ್ಗೆ ಕಳೆದ 20 ದಿನಗಳಿಂದ ಸತತವಾಗಿ ಆಪಾದಿತನ ಪತ್ತೆ ಕಾರ್ಯದಲ್ಲಿ ಶ್ರಮ ವಹಿಸಿದ್ದು ಆರೋಪಿಯ ಯಾವುದೇ ಸುಳಿವು ಇಲ್ಲದಿದ್ದರೂ ಕೂಡ ಹೆಚ್ಚಿನ ಪರಿಶ್ರಮದಿಂದ ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದ್ದು ಈ ಪ್ರಕರಣದಲ್ಲಿ ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ,ಉಡುಪಿ ಡಿವೈಎಸ್ಪಿ ಟಿ.ಜೈ ಶಂಕರ್, ಮಣಿಪಾಲ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಪಿಎಸ್ಐ ಶ್ರೀಧರ್ ಎಂ.ಪಿ, ಪ್ರೊಬೇಷನರಿ ಪಿಎಸ್ಐ ನಿರಂಜನ್ ಗೌಡ ಹಾಗೂ ಠಾಣಾ ಸಿಬ್ಬಂದಿಗಳು ‌ಮತ್ತು ಡಿಸಿಐಬಿ‌ ಇನ್ಸ್‌ಪೆಕ್ಟರ್ ಕಿರಣ್ ಮತ್ತು ಸಿಬ್ಬಂದಿಗಳು,ಉಡುಪಿ ಸೆನ್ ಪೊಲೀಸ್ ಇನ್ಸ್‌ಪೆಕ್ಟರ್ ಸೀತರಾಮ್ ಮತ್ತು ಸಿಬ್ಬಂದಿಗಳು ತನಿಖೆಯಲ್ಲಿ ಸಹಕರಿಸಿದ್ದರು.

Comments are closed.