ಕರಾವಳಿ

ಕ್ರಿಕೆಟ್ ಬೆಟ್ಟಿಂಗ್ ; ಮಂಗಳೂರಿನಲ್ಲಿ ಮತ್ತಿಬ್ಬರ ಸೆರೆ – ಲಕ್ಷಾಂತರ ರೂ. ನಗದು ವಶ

Pinterest LinkedIn Tumblr

ಮಂಗಳೂರು, ಮಾರ್ಚ್. 31: ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಇದು ಸೇರಿ ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಪಟ್ಟಂತೆ ಮೂರನೇ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳನ್ನು ಜಪ್ಪಿನಮೊಗರು ನಿವಾಸಿ ಲಕ್ಷಿತ್ ಯಾನೆ ಮನೀಶ್ (20) ಮತ್ತು ಬಿಜೈ ನಿವಾಸಿ ನಿತಿನ್ (26) ಎಂದು ಹೆಸರಿಸಲಾಗಿದೆ. ನಗರದಲ್ಲಿ ಆನ್‌ಲೈನ್ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಮೂಲತಃ ತೊಕ್ಕೊಟ್ಟು ನಿವಾಸಿಗಳಾದ ಮೆಲ್ವಿನ್ ವಿಶ್ವಾಸ್ ಮತ್ತು ಡೆನ್ಸಿಲ್ ಎಂಬವರು ಈ ಬೆಟ್ಟಿಂಗ್ ಬುಕ್ಕಿಗಳು. ಪ್ರತಿ ಬಾರಿಯೂ ಐಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯುವ ಅವಧಿಯಲ್ಲಿ ಇವರು ಗೋವಾಕ್ಕೆ ತೆರಳಿ ಅಲ್ಲಿಂದ ಆನ್‌ಲೈನ್ ಮೂಲಕ ಬುಕ್ಕಿಂಗ್ ವ್ಯವಹಾರ ಕುದುರಿಸುತ್ತಾರೆ. ಈ ಮೂಲಕ ಹಲವರನ್ನು ತಮ್ಮ ಬಲೆಗೆ ಬೀಳಿಸಿ ಲಕ್ಷಾಂತರ ರೂ. ವ್ಯವಹಾರ ನಡೆಸುತ್ತಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುರುವಾರ ನಡೆದ ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲೂ ಬುಕ್ಕಿಗಳ ಮೂಲಕ ರಾಜೇಶ್ ಎಂಬಾತ ಆಯಪ್ ಮೂಲಕ ಬೆಟ್ಟಿಂಗ್ ಹಾಕುತ್ತಾನೆ. ಪಂದ್ಯದಲ್ಲಿ ಹಣ ಕಳೆದುಕೊಂಡ ಬಳಿಕ ಬೆಟ್ಟಿಂಗ್ ಹಣವನ್ನು ಲಿಖಿತ್ ಯಾನೆ ಮನೀಶ್ ಎಂಬಾತನ ಮುಖಾಂತರ ನಿತಿನ್‌ಗೆ ಕೊಡುತ್ತಾನೆ. ನಿತಿನ್ ಆ ಹಣವನ್ನು ಬುಕ್ಕಿ ಮೆಲ್ವಿನ್ ವಿಶ್ವಾಸ್‌ಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿರುತ್ತಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಿಂದ 3.96 ಲಕ್ಷ ರೂ. ಹಾಗೂ 3 ಮೊಬೈಲ್, ಐ-20 ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್, ಎಸ್ಸೈ ಕಬ್ಬಾಳ್‌ರಾಜ್, ಸಿಬ್ಬಂದಿ ಮಣಿ, ಯೋಗೀಶ್, ರಾಮಣ್ಣ, ರಾಜಾ ಪಾಲ್ಗೊಂಡಿದ್ದರು.

Comments are closed.