ಕರಾವಳಿ

ಎಂಬಿಎಯಲ್ಲಿ ಎಸ್‌ಡಿಎಂ ಕಾಲೇಜಿಗೆ ಅವಳಿ ರ್‍ಯಾಂಕ್ : ಉರ್ವದ ಕೀರ್ತಿ ಕುಮಾರಿಗೆ 4ನೇ ರ್‍ಯಾಂಕ್

Pinterest LinkedIn Tumblr

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು, ಸ್ನಾತಕೋತ್ತರ ಆಡಳಿತೋದ್ಯಮ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇದರ ಎಂಬಿಎ ವಿಭಾಗದ ವಿದ್ಯಾರ್ಥಿನಿ ಕೀರ್ತಿ ಕುಮಾರಿ ಯು.ಪಿ. ಅವರು ನಾಲ್ಕನೇ ರ್‍ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಐದನೇ ರ್‍ಯಾಂಕನ್ನು ಇದೇ ಸಂಸ್ಥೆಯ ವಿದ್ಯಾರ್ಥಿನಿ ಶ್ರೇಯಾ ಸಿ.ಎಸ್.ಪಡೆದುಕೊಂಡಿದ್ದಾರೆ.

`ರ್‍ಯಾಂಕ್ ದೊರೆತಿರುವುದು ತುಂಬಾನೆ ಖುಷಿ ತಂದಿದೆ. ಹೆತ್ತವರ ನಿರಂತರ ಪ್ರೋತ್ಸಾಹ ಮತ್ತು ಪ್ರಾಧ್ಯಾಪಕರು ನೀಡಿದ ಸೂಕ್ತ ಮಾರ್ಗದರ್ಶನದಿಂದ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ’ ಎಂದು ಕೀರ್ತಿ ಕುಮಾರಿ ಸಂತಸ ಹಂಚಿಕೊಂಡಿದ್ದಾರೆ.

ಪ್ರತಿದಿನ ಕನಿಷ್ಠ 9 ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೆ. ಸತತ ಓದು ಮತ್ತು ಕಠಿಣ ಪರಿಶ್ರಮವಿದ್ದರೆ ಗೆಲುವು ನಿಶ್ಚಿತ. ಪದವಿಯಲ್ಲೂ ತನಗೆ ರ್‍ಯಾಂಕ್ ದೊರೆತಿದ್ದು, ಮುಂದೆಯೂ ಉತ್ತಮ ಸಾಧನೆ ಮಾಡಬೇಕೆಂಬ ಕನಸು ಹೊಂದಿದ್ದೇನೆ ಎನ್ನುತ್ತಾರೆ ಕೀರ್ತಿ ಕುಮಾರಿ.

`ಇಬ್ಬರೂ ವಿದ್ಯಾರ್ಥಿನಿಯರೂ ಕೂಡ ರ್‍ಯಾಂಕ್ ಪಡೆಯಲು ಅರ್ಹರಾಗಿದ್ದರು. ಪ್ರಥಮ ಸೆಮಿಸ್ಟರ್‌ನಿಂದಲೇ ಕಠಿಣ ಪರಿಶ್ರಮದೊಂದಿಗೆ ಓದಿನತ್ತ ವಿಶೇಷ ಗಮನಹರಿಸುತ್ತಿದ್ದರು. ಈ ವಿದ್ಯಾರ್ಥಿನಿಯರಿಗೆ ರ್‍ಯಾಂಕ್ ಬಂದೇ ಬರುತ್ತೆ ಎಂಬ ನಿರೀಕ್ಷೆ ಇತ್ತು. ಅದೀಗ ಸಾಕಾರ ಗೊಂಡಿದೆ. ಇವರ ಸಾಧನೆಯ ಬಗ್ಗೆ ಹೆಮ್ಮೆಯಿದೆ ‘ಎಂದು ಎಸ್‌ಡಿಎಂ ಎಂಬಿಯ ವಿಭಾಗದ ನಿರ್ದೇಶಕಿ ಡಾ.ಸೀಮಾ ಎಸ್.ಶಣೈ ರ್‍ಯಾಂಕ್ ವಿಜೇತರನ್ನು ಅಭಿನಂದಿಸಿದ್ದಾರೆ.

ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ಕೀರ್ತಿಯವರು ಈ ನಿಟ್ಟಿನಲ್ಲಿ ತರಬೇತಿ ಮುಂದುವರಿಸಿದ್ದಾರೆ. ಈಕೆ ನಗರದ ಉರ್ವಾ ಮಾರಿಗುಡಿ ಸಮೀಪದ ವೆಲ್ಸ್‌ಪೇಟೆ ನಿವಾಸಿ ಪ್ರಕಾಶ್‌ಚಂದ್ರ ಮತ್ತು ಪೂವಮ್ಮ ದಂಪತಿಯ ಪುತ್ರಿ. ಮಗಳಿಗೆ ರ್‍ಯಾಂಕ್ ಬಂದ ಖುಷಿಯನ್ನು ಹೆತ್ತವರು ಆಕೆಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.

ಎಂಬಿಎಯಲ್ಲಿ ಐದನೇ ರ್‍ಯಾಂಕ್ ಬಂದಿರುವ ಶ್ರೇಯಾ ಸಿ.ಎಸ್.ಅವರು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ದಲ್ಲಿದ್ದಾರೆ. ಇವರು ಸಕಲೇಶಪುರದ ಸೋಮಣ್ಣ ಮತ್ತು ಸುಶೀಲ ದಂಪತಿಯ ಪುತ್ರಿ.

ಖುಷಿ ತಂದಿದೆ :ರ್‍ಯಾಂಕ್ ದೊರೆತಿರುವುದು ತುಂಬಾನೆ ಖುಷಿ ತಂದಿದೆ. ಇನ್ನಷ್ಟು ಸಾಧನೆ ಮಾಡವಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.ಪ್ರೋತ್ಸಾಹ ನೀಡಿದ ಎಲ್ಲರನ್ನು ಅಭಿನಂದಿಸುತ್ತೇನೆ.-ಕೀರ್ತಿ ಕುಮಾರಿ ಯು.ಪಿ.

Comments are closed.