ಕರಾವಳಿ

ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ : ಯುವ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಜಿಲಾಧಿಕಾರಿ

Pinterest LinkedIn Tumblr

ಮಂಗಳೂರು, ಮಾರ್ಚ್.29: ದ.ಕ.ಜಿಲ್ಲಾಡಳಿತ, ದ.ಕ. ಜಿಲ್ಲಾ ಸ್ವೀಪ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಪಾಂಡೇಶ್ವರದಲ್ಲಿರುವ ಖಾಸಗಿ ಕಾಲೇಜ್‌ನಲ್ಲಿ ಯುವ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಿದರು. ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ ಎಂದು ಯಾರೂ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಉತ್ತಮ ಸರಕಾರದ ನಿರ್ಮಾಣದಲ್ಲಿ ಪ್ರಜೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಬೇಕು ಎಂದು ಜಿಲಾಧಿಕಾರಿ ಈ ವೇಳೆ ಕರೆ ನೀಡಿದರು.

ದೇಶದ ಅಭಿವೃದ್ಧಿಗೆ ಯುವ ಸಮೂಹದ ಮತದಾನ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಜತೆಗೂಡಿ ಆಚರಿಸಬೇಕು. 18 ವರ್ಷ ಮೇಲ್ಪಟ್ಟಿದ್ದು, ಮತದಾನಕ್ಕೆ ನೋಂದಣಿ ಮಾಡದೆ ಇದ್ದಲ್ಲಿ ತಕ್ಷಣ ನೋಂದಣಿ ಮಾಡಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸುವಲ್ಲಿ ಯಾರೂ ಹಿಂದೆ ಸರಿಯಬಾರದು. ಮತದಾನದ ಜಾಗೃತಿ ಎಲ್ಲೆಡೆ ಆಗಬೇಕು. ಚುನಾವಣಾ ಆಯೋಗವು ಇಂದು ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯನ್ನು ನಡೆಸುತ್ತಿದ್ದು, ಮತದಾನ ಜಾಗೃತಿಗೂ ಆದ್ಯತೆ ನೀಡುತ್ತಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಮತಗಟ್ಟೆ, ಮತದಾನ ಯಂತ್ರ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆಯು ನಡೆಯಿತು. ಚುನಾವಣಾ ಅಧಿಕಾರಿಗಳು ಮತದಾನ ಮಾಡುವ ಹಾಗೂ ವಿವಿ ಪ್ಯಾಟ್ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಶೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿ ಎ.ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿ.ಪಂ ಸಿಇಒ ಡಾ.ಸೆಲ್ವಮಣಿ, ಶ್ರೀನಿವಾಸ್ ವಿವಿಯ ಸಹ ಕುಲಪತಿ ಶ್ರೀನಿವಾಸ್ ರಾವ್, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮನಪಾ ಪ್ರಭಾರ ಆಯುಕ್ತ ಬಿ.ಎಸ್. ನಾರಾಯಣಪ್ಪ ಉಪಸ್ಥಿತರಿದ್ದರು. ಶ್ರೀನಿವಾಸ ವಿವಿ ಉಪ ಕುಲಪತಿ ಪಿ.ಎಸ್.ಐತಾಳ್ ಸ್ವಾಗತಿಸಿದರು.

Comments are closed.