ಕರಾವಳಿ

ಮಿಥುನ್ ರೈ ಈ ಚುನಾವಣೆಯಲ್ಲಿ ಸೋತರೆ ಕುದ್ರೋಳಿ ಕ್ಷೇತ್ರ ಸೇರಿದಂತೆ ಉಳ್ಳಾಲ ಮಸೀದಿಗೆ ಕಾಲಿಡುವುದಿಲ್ಲ ಎಂದ ಪೂಜಾರಿ

Pinterest LinkedIn Tumblr

ಮಂಗಳೂರು, ಮಾರ್ಚ್ 25: ದ.ಕ‌. ಜಿಲ್ಲಾ ಕಾಂಗ್ರೆಸ್​ನ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಇಂದು ಬೆಳಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದುಕೊಂಡರು.ಪೂಜಾರಿಯವರು ಮಿಥುನ್ ರೈಯವರನ್ನು ದೇವರು ಒಳ್ಳೆಯದು ಮಾಡಲಿ ಎಂದು ಅಪ್ಪಿಕೊಂಡು ಆಶೀರ್ವಾದಿಸಿದರು. ನಂತರ ಮಿಥುನ್ ರೈ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪೂಜಾರಿಯವರು, ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ಅವರು ಸೋತರೆ ನಾನೆಂದೂ ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಅವರು ಕೂಡಾ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಒಂದು ವೇಳೆ ಮಿಥುನ್ ರೈ ಸೋತರೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಉಳ್ಳಾಲ ಮಸೀದಿಗೆ ನಾನೆಂದೂ ಕಾಲಿಡುವುದಿಲ್ಲ ಎಂದು ಪೂಜಾರಿ ಸಾರ್ವಜನಿಕ ಸಭೆಯಲ್ಲಿ ಪ್ರತಿಜ್ಞೆ ಮಾಡಿದರು.

ಇದಕ್ಕೂ ಮೊದಲು ಹಲವು ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಮೇಲೆ ಗರಂ ಆಗಿದ್ದ ಪೂಜಾರಿಯವರು ಎಲ್ಲರ ಮೇಲೂ ಟೀಕಾಪ್ರಹಾರ ಮಾಡಿದ್ದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್​ಗೆ ಸೋಲು ಗ್ಯಾರಂಟಿ. ಮೊದಲು ಹೋಗಿ ಗೋಕರ್ಣನಾಥ ದೇವರಲ್ಲಿ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇಲ್ಲಿ ಮಾತ್ರ ಅಲ್ಲ ಮಸೀದಿ, ಚರ್ಚ್​ನಲ್ಲಿಯೂ ಪ್ರಾರ್ಥಿಸಿ ಎಂದು ಹೇಳಿದ್ದರು. ಇದೇ ವೇಳೆ ಮಿಥುನ್ ರೈ ಸೋಲುತ್ತಾರೆ ಎಂದು ಜನಾರ್ದನ ಪೂಜಾರಿ ಅವರು ಶಾಪ ಕೊಟ್ಟಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದಕ್ಕೆ ಕಾಂಗ್ರೆಸ್ ಸಮಾವೇಶದಲ್ಲಿ ಉತ್ತರ ನೀಡಿದ ಪೂಜಾರಿಯವರು, ಕಾಂಗ್ರೆಸ್ ತುಲನೆ ಮಾಡಿ, ಸಮುದ್ರ ಮಂಥನ ಮಾಡಿದಂತೆ, ಬೆಸ್ಟ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದೆ. ಇನ್ನು ಜನರ ಕೈಯಲಿದೆ. ಮಿಥುನ್ ರೈ ಜನರ ಆಶೀರ್ವಾದ ಪಡೆಯಲು ಹೊರಟಿದ್ದಾರೆ. ಅವರೊಂದಿಗೆ ಮೆರವಣಿಗೆಯಲ್ಲಿ ನಾನು ಹೊರಟಿದ್ದೇನೆ. ನನಗೆ ನಿನ್ನೆ ರಾತ್ರಿ ಆ ಶಿವನೇ ಕನಸಿನಲ್ಲಿ ಬಂದು ಮಿಥುನ್ ರೈ ಖಂಡಿತಾ ಗೆಲ್ಲುತ್ತಾರೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು.

Comments are closed.