ಕರ್ನಾಟಕ

ಹಾಸನದಲ್ಲಿ ಮುಂದುವರಿಯುತ್ತಿರುವ ಆಪರೇಷನ್​ ಕಮಲ: ದೇವೇಗೌಡರ ಮೊಮ್ಮಗನನ್ನು ಮಣಿಸಲು ರಣತಂತ್ರ

Pinterest LinkedIn Tumblr


ಹಾಸನ: ದೇವೇಗೌಡರ ತವರು ಕ್ಷೇತ್ರದಲ್ಲಿ ಆಪರೇಷನ್​ ಕಮಲ ಮುಂದುವರೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಇಂದು ಮಾಜಿ ಶಾಸಕ ಪುಟ್ಟೇಗೌಡ ಅವರ ಮನೆಗೆ ದಿಢೀರ್​ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಕಾಂಗ್ರೆಸ್​ನ ನಿಷ್ಠಾವಂತ ಮುಖಂಡರಾಗಿರುವ ಮಾಜಿ ಶಾಸಕ ಪುಟ್ಟೇಗೌಡ ಅವರಿಗೂ ಹಾಗೂ ದೇವೇಗೌಡ ಅವರಿಗೂ ದಶಕದ ವೈರತ್ವವಿದೆ. ರಾಜಕೀಯ ಆರಂಭದಲ್ಲಿ ಜೆಡಿಎಸ್​ನಲ್ಲಿದ್ದ ಪುಟ್ಟೇಗೌಡ ಅವರು 2013ರಲ್ಲಿ ದೇವೇಗೌಡರ ಪಾಳೆಯ ತೊರೆದು ಕಾಂಗ್ರೆಸ್​ ಸೇರಿದ್ದರು. ಇವರ ನಡುವಿನ ಮುನಿಸನ್ನು ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಯಡಿಯೂರಪ್ಪ, ಪುಟ್ಟೇಗೌಡರನ್ನು ಪಕ್ಷಕ್ಕೆ ಸೆಳೆಯುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ವಿರುದ್ಧ ಕಾಂಗ್ರೆಸ್​ ನಾಯಕರ ಅಸಮಾಧಾನವನ್ನು ಅರಿತಿರುವ ಬಿಜೆಪಿ, ಜೆಡಿಎಸ್​ ಭದ್ರಕೋಟೆಯಲ್ಲಿ ಅವರಿಗೆ ಟಾಂಗ್​ ನೀಡಲು ಮುಂದಾಗಿದೆ. ಈಗಾಗಲೇ ಎ ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್​ ನೀಡಿದ್ದು, ಇನ್ನುಳಿದ ಅಸಮಾಧಾನಿತ ನಾಯಕರ ಮೇಲೆ ಕಣ್ಣು ಹಾಕಿದೆ.

ಮೈತ್ರಿ ಅಭ್ಯರ್ಥಿ ವಿರುದ್ಧ ಇರುವ ಒಳಬೇಗುದಿ ಗಮನಿಸಿದ ಯಡಿಯೂರಪ್ಪ, ಬಿಜೆಪಿಗೆ ಆಂತರಿಕ ಬೆಂಬಲ ನೀಡುವಂತೆ ಪುಟ್ಟೇಗೌಡರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಬಿಜೆಪಿಗೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ಈ ಆಹ್ವಾನವನ್ನು ಮಾಜಿ ಶಾಸಕರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ತಮ್ಮ ಬಗ್ಗೆ ಇರುವ ಅಸಮಾಧಾನವನ್ನು ಅರಿತ ಪ್ರಜ್ವಲ್​ ರೇವಣ್ಣ ಬ್ರೇಕ್​ ಫಾಸ್ಟ್​ ರಾಜಕೀಯಕ್ಕೆ ಮುಂದಾಗಿದ್ದರು. ಪುಟ್ಟೇಗೌಡ, ಶಿವರಾಂ ಸೇರಿದಂತೆ ಹಲವರ ಮನೆಗೆ ತೆರಳಿದ್ದ ರೇವಣ್ಣ, ತಮ್ಮ ಮಗನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಮೂಲಕ ಮೈತ್ರಿ ಪಕ್ಷದ ನಾಯಕರ ಮನವೊಲಿಕೆ ಮಾಡಿದ್ದರು.

ಚನ್ನರಾಯಪಟ್ಟಣದ ಪುಟ್ಟೇಗೌಡ ಕೂಡ ರೇವಣ್ಣ ಅವರ ಮಾತಿಗೆ ಒಪ್ಪಿ ಪ್ರಜ್ವಲ್​ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ, ಈಗ ಪುಟ್ಟೇಗೌಡ ಮನೆಯಲ್ಲಿ ಯಡಿಯೂರಪ್ಪ ಕಾಣಿಸಿಕೊಳ್ಳುವ ಮೂಲಕ ದೇವೇಗೌಡರ ಮೊಮ್ಮಗನನ್ನು ಮಣಿಸಲು ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

Comments are closed.