ಕರ್ನಾಟಕ

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೃದಯಾಘಾತದಿಂದ ನಿಧನ

Pinterest LinkedIn Tumblr

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಧಾರವಾಡದ ಕಟ್ಟಡದ ದುರಂತ ಸ್ಥಳದಲ್ಲೇ ಮಾರ್ಚ್​ 20 ರಿಂದ ಬೀಡು ಬಿಟ್ಟಿದ್ದ ಸಿ.ಎಸ್​ ಶಿವಳ್ಳಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯರಾತ್ರಿಯ ವರೆಗೆ ಅವರು ಅಲ್ಲಿಯೇ ಇದ್ದರು. ಇಂದೂ ಕೂಡ ಅಲ್ಲಿಯೇ ಇದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.

ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಸಚಿವ ಶಿವಳ್ಳಿ ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಶಿವಳ್ಳಿ ಅವರು ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಇಲಾಖೆ ಸಚಿವರಾಗಿದ್ದರು.

56 ವರ್ಷದ ಶಿವಳ್ಳಿ 1999ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ದಿ. ಎಸ್. ಬಂಗಾರಪ್ಪ ಅವರ ಬೆಂಬಲಿಗರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ 3 ಬಾರಿ ಸೋಲು ಹಾಗೂ 3 ಬಾರಿ ಗೆಲುವು ಕಂಡಿದ್ದಾರೆ. 2 ಬಾರಿ ಪಕ್ಷೇತರರಾಗಿಯೂ ಚುನಾವಣೆ ಕಣಕ್ಕೆ ಇಳಿದಿದ್ದರು. 1999, 2013, 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಅವರು ರೈತ ಪರ ಹೋರಾಟದ ಮೂಲಕ ಸಾರ್ವಜನಿಕ ಬದುಕಿಗೆ ಬಂದವರು. ನವಲಗುಂದ ತಾಲೂಕಿನ ಶೆಲವಡಿ ಗ್ರಾಮದಲ್ಲಿ ಜನಿಸಿರುವ ಅವರು ಕುಂದಗೋಳ ತಾಲೂಕು ಯರಗುಪ್ಪಿಯವರು.

Comments are closed.