ವಿಶೇಷ ವರದಿ: ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಕಳೆದ ಬಾರಿಯೇ ಎಲ್ಲರಿಗೂ ತಿಳಿದ ವಿಚಾರ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ಪ್ರಮುಖ ಮಾಧ್ಯಮವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಚುನಾವಣಾ ಪ್ರಚಾರ ಮಾಡಿದರೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಜೈಲು ಸೇರುತ್ತಾರೆಂಬ ಮಾತುಗಳು ಕೇಳಿಬಂದ ಹಿನ್ನೆಲೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಕೆಲವರುಗಳು ತಮ್ಮ ಗ್ರೂಫ್ ಗಳನ್ನು ತಾವೇ ರಕ್ಷಿಸಿಕೊಂಡಿದ್ದಾರೆ.
ಏನೇನು ಮಾಡ್ತಿದ್ದಾರೆ?
ನೀತಿ ಸಂಹಿತೆ ಸಾಮಾಜಿಕ ಜಾಲತಾಣಕ್ಕೂ ಅನ್ವಯವಾಗುತ್ತದೆಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಕೆಲವರು ಗ್ರೂಪ್ ಗಳನ್ನು ಡಿಲೀಟ್ ಮಾಡಿದ್ದಾರೆ. ಬಹುತೇಕ ಮಂದಿ ‘ವಾಟ್ಸಾಪ್ ಗ್ರೂಪಿ’ಗೆ ಬೀಗ ಜಡಿಯಲಾಗಿದೆ’ ಎಂದು ಬರೆದುಕೊಂಡು ತಮ್ಮ ವಾಟ್ಸಾಪ್ ಸೆಟ್ಟಿಂಗ್ ಬದಲಾಯಿಸಿ ‘ಓನ್ಲಿ ಅಡ್ಮಿನ್ ಕ್ಯಾನ್ ಸೆಂಡ್ ಮೆಸೇಜಸ್’ ಎನ್ನುವ ಮಾರ್ಗವನ್ನು ಗ್ರೂಪಿಗೆ ಅಳವಡಿಸಿದ್ದು ಇದರಿಂದಾಗಿ ಗ್ರೂಫಿನಲ್ಲಿರುವ ಇತರೆ ಸದಸ್ಯರು ಪೋಸ್ಟ್ ಮಾಡಲಾಗುವುದಿಲ್ಲ. ಬದಲಾಗಿ ಅಡ್ಮಿನ್ ಮಾತ್ರವೇ ಪೋಸ್ಟ್ ಮಾಡಬಹುದು. ಇನ್ನು ಕೆಲ ಬುದ್ದಿವಂತರು ಈ ಗ್ರೂಪಿಗೆ ಕಳುಹಿಸುವ ಯಾವುದೇ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟ್ ಗಳಿಗೆ ಅವರೇ ಜವಬ್ದಾರರು ಬದಲಾಗಿ ಅಡ್ಮಿನ್ ಅಲ್ಲ ಎಂದು ಎಚ್ಚರಿಕೆ ಬರಹ ಪೋಸ್ಟ್ ಮಾಡಿ ಗ್ರೂಪ್ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಗ್ರೂಪಿನಲ್ಲಿ ಮೊದಲು ಅನೇಕ ಮಂದಿ ಅಡ್ಮಿನ್ ಮಾಡಬಹುದಿತ್ತು, ಅದು ಗ್ರೂಪ್ ರಚಿಸಿದ ಪ್ರಮುಖ ಅಡ್ಮಿನ್ ಮಾಡಬಹುದಾದ ಅಧಿಕಾರವಿತ್ತು. ಇದೀಗ ಅಂಥ ಕೆಲವರು ಎಲ್ಲಾ ಇತರೆ ಅಡ್ಮಿನ್ ಗಳನ್ನು ತೆಗೆದು ಗ್ರೂಪ್ ರಚಿಸಿದವನೇ ಅಡ್ಮಿನ್ ಆಗಿ ಮುಂದುವರಿಯುತ್ತಿದ್ದಾರೆ.
ಚುನಾವಣಾ ಆಯೋಗ ಏನು ಹೇಳುತ್ತೆ…
ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಭ್ಯರ್ಥಿಯ ವೈಯಕ್ತಿಕ ನಿಂದನೆ, ತೇಜೋವಧೆ ಮಾಡುವಂತಿಲ್ಲ. ಅವರಿಗೆ ಧಾರ್ಮಿಕವಾಗಿ ಅಪಮಾನ ಮಾಡುವಂತಿಲ್ಲ. ಕಾನೂನಿನ ವಿರುದ್ಧವಾಗಿ ಅಂತಹ ಕೆಲಸ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ತಮ್ಮ ನಾಯಕರ ಅಥವಾ ಪಕ್ಷದ ಪರ ಪ್ರಚಾರ ಮಾಡಲು ಯಾವುದೇ ಅಡ್ಡಿ ಇಲ್ಲ. ಪ್ರಚಾರ ಕೈಗೊಳ್ಳುವುದು ಅಪರಾಧವಲ್ಲ. ಅವರ ಸಾಧನೆಗಳನ್ನು ಬಿಂಬಿಸಬಹುದು. ಆದರೆ, ಮತದಾರರ ಮೇಲೆ ಪ್ರಭಾವ ಬೀರುವಂತಹ ಭರವಸೆಗಳನ್ನು ನೀಡಬಾರದು. ಟೀಕೆಗಳನ್ನು ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು. ಯಾವುದೇ ಪಕ್ಷದ ಮುಖಂಡರ ಹೇಳಿಕೆ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲು ಅವಕಾಶವಿದೆ. ಅನುಮತಿ ಪಡೆಯದೇ ಪ್ರಚಾರ ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ.
Comments are closed.