ಉಡುಪಿ: ಪತ್ನಿ ಹಾಗೂ ಆಕೆಯ ಕುಟುಂಬದವರಿಂದ ಹಣ ಕೀಳುವ ಉದ್ದೇಶದಿಂದ ಪತ್ನಿಯ ಹೆಸರಿನ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಬಲಾತ್ಕಾರದಿಂದ ಸಹಿ ಪಡೆದು ಅದನ್ನು ಕೆಲವರಿಗೆ ನೀಡಿ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬೆದರಿಕೆಯೊಡ್ಡಿದ ಕಳವಳಕಾರಿ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಕರಂಬಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ಶರೀಫ್ ಅಲಿ ಪ್ರಕರಣದ ಆರೋಪಿ. ಮೂಲತಃ ಕೇರಳದ ತಲಶ್ಶೇರಿಯವರಾದ ಜಂಶಿನಾ ಸಂತ್ರಸ್ತ ಮಹಿಳೆ.
ಈ ಪ್ರಕರಣದಲ್ಲಿ ಜಂಶೀನಾರಿಗೆ ನೆರವಿಗೆ ಧಾವಿಸಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಈ ಬಗ್ಗೆ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಜಂಶಿನಾ ತಾಯಿ ಮತ್ತು ಅಕ್ಕ ಸಲ್ಮಾರ ಆಶ್ರಯದಲ್ಲೇ ಬೆಳೆದವಳು. ಉಡುಪಿಯ ಮುಹಮ್ಮದ್ ರಫೀಕ್‌ರನ್ನು ಮದುವೆಯಾದ ಅಕ್ಕ ಸಲ್ಮಾ, ತನ್ನ ತಂಗಿಗೂ ಉಡುಪಿಯ ಹುಡುಗನನ್ನೇ ಹುಡುಕಿ ಮದುವೆ ಮಾಡಿಸಿದ್ದಳು.
(Press Meet)
2013ರ ಜನವರಿಯಲ್ಲಿ ಶರೀಫ್ ಜೊತೆ ಜಂಶೀನಾರ ಮದುವೆ ಮಾಡಿಕೊಡಲಾಗಿತ್ತು. ಆಗ ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಶರೀಫ್ ಪಡೆದಿದ್ದ. ಮದುವೆಯಾದ ನಾಲ್ಕೇ ತಿಂಗಳಿಗೆ ಜಂಶಿನಾಳಲ್ಲಿದ್ದ ಚಿನ್ನಾಭರಣಗಳನ್ನು ಮನೆಯವರೆಲ್ಲ ಸೇರಿ ಬಲವಂತವಾಗಿ ಪಡೆದು ಮೀನು ಸಾಗಾಟದ ಲಾರಿ ಖರೀದಿಸಿದ್ದರು. ಬಳಿಕ ಹಣಕ್ಕಾಗಿ ಪೀಡಿಸಲಾರಂಭಿಸಿದ ಶರೀಫ್ ಪ್ರತಿ ಎರಡು ತಿಂಗಳಿಗೊಮ್ಮೆ ಜಂಶೀರಾರನ್ನು ತವರಿಗಟ್ಟಿ ಹಣ ತರಿಸುತ್ತಿದ್ದ. ಹೀಗೆ ಆರು ಲಕ್ಷ ರೂ.ಗಳನ್ನು ಆತ ಬಡ ಕುಟುಂಬದಿಂದ ವಸೂಲಿ ಮಾಡಿದ್ದಾನೆ ಎಂದವರು ವಿವರಿಸಿದರು.
2014ರಲ್ಲಿ ಶರೀಫ್‌ಗೆ ದಮಾಮ್ ನಲ್ಲಿ ಉದ್ಯೋಗ ದೊರೆತು ಆತ, ಜಂಶೀನಾ ತಾಯಿಯಿಂದಲೇ ಬೇಕಾದ ಎಲ್ಲಾ ಹಣವನ್ನು ವಸೂಲಿ ಮಾಡಿ ಕೊಲ್ಲಿಗೆ ಹಾರಿದ. ಆತ ಕೊಲ್ಲಿಗೆ ಹೋಗುತ್ತಲೇ ಮನೆಯಲ್ಲಿದ್ದ ಆಕೆಯ ಅತ್ತೆ, ಜಂಶಿನಾಳ ಹೆಸರಿನಲ್ಲಿ ವಿವಿಧ ಬ್ಯಾಂಕು ಹಾಗೂ ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದಿದ್ದಾರೆ. ದಮಾಮ್‌ನಿಂದ ಊರಿಗೆ ಹಿಂದಿರುಗಿದ ಶರೀಫ್ 2017ರ ಜುಲೈಯಲ್ಲಿ ಮತ್ತೆ ಜಂಶಿನಾ ತಾಯಿಯಿಂದ ಒಂದು ಲಕ್ಷ ಪಡೆದು ಲಾರಿ ತೆಗೆದುಕೊಂಡು ಸಿಕ್ಕಸಿಕ್ಕಲ್ಲಿ ಸಾಲ ಮಾಡಿದ. ಇದಕ್ಕಾಗಿ ಫೈನಾನ್ಸ್‌ನಲ್ಲಿ ಆಕೆಯ ಹೆಸರಿನಲ್ಲಿ ಪಡೆದ ಸಾಲದ ಒಂದು ಕಂತನ್ನೂ ಸಹ ಕಟ್ಟಲ್ಲಿಲ್ಲ ಎಂದವರು ವಿವರಿಸಿದರು.
ಅನಂತರ ಆಕೆಯಿಂದ ಹಣ ಕೀಳಲು ಶರೀಫ್ ಅಲಿ ಬಳಸಿದ ಮಾರ್ಗವೇ ಆಕೆಯ ಚೆಕ್ ಬೌನ್ಸ್ ಆಗಿ ಕ್ರಿಮಿನಲ್ ಮೊಕದ್ದಮೆ ಸಂಚು. ವಿಜಯಾ ಬ್ಯಾಂಕಿನ ಆಕೆಯ ಖಾತೆಯ ಚೆಕ್‌ಬುಕ್ ಪಡೆದು, 10-11 ಚೆಕ್‌ಗಳಿಗೆ ದೈಹಿಕ ಹಿಂಸೆ ನೀಡಿ ಬಲಾತ್ಕಾರವಾಗಿ, ಆಕೆಯ ಸಹಿ ಪಡೆದಿದ್ದ ಡಾ.ಶ್ಯಾನುಭಾಗ್ ತಿಳಿಸಿದರು.
2018ರ ಡಿಸೆಂಬರ್‌ನಲ್ಲಿ ಶರೀಫ್ ಮತ್ತು ಮನೆಯವರು ಜಂಶಿನಾಳನ್ನು ಹೊಡೆದು ಮನೆಯಿಂದ ಹೊರಹಾಕಿದರು. ಸಮಾಜದ ಹಿರಿಯರೊಂದಿಗೆ ಮಾತುಕತೆಯ ಬಳಿಕ ರಾಜಿಯಾಗಿ ಆತ್ರಾಡಿಯಲ್ಲಿ ಶರೀಫ್ ಮತ್ತು ಜಂಶಿನಾಗೆ ಮನೆಗೊತ್ತು ಮಾಡಲಾಯಿತು. ಆದರೆ ಒಂದೇ ತಿಂಗಳಲ್ಲಿ ಈ ವ್ಯವಸ್ಥೆಯೂ ಮುರಿದು ಬಿತ್ತು. ಆತ ಮತ್ತೆ ಆಕೆಯನ್ನು ಮನೆಯಿಂದ ಓಡಿಸಿದ. ಈಗ ಜಂಶಿನಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಬಂದು ಮಾರ್ಗದರ್ಶನ ಅಪೇಕ್ಷಿಸಿದ್ದಾರೆ. ಅಂದೇ ಮಣಿಪಾಲ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಇದೀಗ ಪ್ರತಿಷ್ಠಾನ ಆಕೆಯ ಕತೆಯನ್ನು ಕೇಳಿ, ಆಕೆಯ ಪರವಾಗಿ ಹೋರಾಟಕ್ಕಿಳಿದಿದೆ ಎಂದು ಡಾ.ಶ್ಯಾನುಭಾಗ್ ತಿಳಿಸಿದರು.
ವಿಜಯ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಶರೀಫ್, ತನ್ನಲ್ಲಿರುವ ಚೆಕ್‌ಗಳಲ್ಲಿ 3ರಲ್ಲಿ ಲಕ್ಷಾಂತರ ರೂ. ಬರೆದು ಸ್ನೇಹಿತರ ಖಾತೆಗಳ ಮೂಲಕ ಬ್ಯಾಂಕಿಗೆ ಹಾಕಿಸಿ ಬೌನ್ಸ್ ಮಾಡಿಸಿದ್ದಾನೆ. ಕೇಳಿದಷ್ಟು ಹಣ ನೀಡದಿದ್ದರೆ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೇಸು ಹಾಕಿ ಜೈಲಿಗೆ ಹಾಕುವ ಬೆದರಿಕೆ ಒಡ್ಡಿದ್ದಾನೆ ಎಂದರು.
ಇದೀಗ ಈ ಎಲ್ಲಾ ವಿಷಯಗಳನ್ನು ವಿವರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಂಶಿನಾ, ಆಕೆಯ ಅಕ್ಕ ಸಲ್ಮಾ, ತಾಯಿ ಸಫಿಯಾ, ಬಾವ ಮಹಮ್ಮದ್ ರಫೀಕ್ ಹಾಗೂ ಸಂತ್ರಸ್ತರ ನೆರವಿಗೆ ಮುಂದಾಗಿರುವ ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್‌ನ ಸಲಾವುದ್ದೀನ್‌ರ ಉಪಸ್ಥಿತರಿದ್ದರು.
Comments are closed.