ಕರ್ನಾಟಕ

ಸುಮಲತಾ ಅಂಬರೀಷ್ ಗೆ ಟಿಕೆಟ್ ನೀಡುವ ಕುರಿತು ಇನ್ನು ನಿರ್ಧಾರವಾಗಿಲ್ಲ: ಯಡಿಯೂರಪ್ಪ

Pinterest LinkedIn Tumblr


ಹುಬ್ಬಳ್ಳಿ: ಸುಮಲತಾ ಅಂಬರೀಷ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಇನ್ನು ಪಕ್ಷದಲ್ಲಿ ಯಾವುದೇ ಚರ್ಚೆ ಅಥವಾ ನಿರ್ಧಾರವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾವಾಗಿಲ್ಲ. ಸುಮಲತಾ ಅವರು ಈ ಬಗ್ಗೆ ಸ್ಪಷ್ಟ ನಿರ್ಧಾರದ ತೆಗೆದುಕೊಂಡ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದರು.
ದಿವಂಗತ ಅಂಬರೀಷ್​ ಅವರು ಮಂಡ್ಯ ಜನರ ಮನ ಗೆದ್ದ ನಾಯಕ. ಅವರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಶೋಭೆ ತರುವಂತದಲ್ಲ. ಪುತ್ರ ನಿಖಿಲ್ ಕುಮಾರ್​ಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಸುಮಲತಾ ಅವರು ಬಿಜೆಪಿಯ ಸಂಪರ್ಕವನ್ನು ಮಾಡಿಲ್ಲ. ಅದೇ ರೀತಿಯಾಗಿ ಬಿಜೆಪಿಯೂ ಕೂಡ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ ಮಂಡ್ಯ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಈ ಮಧ್ಯೆ, ಸುಮಲತಾ ಅವರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದ್ದು, ಅವರು ಸಹ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯಿಂದ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಆದರೆ ಬಿಜೆಪಿ ಟಿಕೆಟ್ ನೀಡುವುದಾದರೆ ಬೆಂಬಲಿಗರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಮಲತಾ ಹೇಳಿದ್ದಾರೆ.

Comments are closed.