ಕರಾವಳಿ

ಶಿವರಾತ್ರಿಯ ಭಜನೆ ಮತ್ತು ಯಕ್ಷಗಾನಕ್ಕೆ ಪೊಲೀಸರಿಂದ ಅಡ್ಡಿ : ವಿವಿಧ ಸಂಘಟನೆಗಳಿಂದ ವ್ಯಾಪಕ ಖಂಡನೆ – ಆಕ್ರೋಷ

Pinterest LinkedIn Tumblr

ಮಂಗಳೂರು,ಮಾರ್ಚ್.06 :ಶಿವರಾತ್ರಿಯ ಜಾಗರಣೆ ಪ್ರಯುಕ್ತ ನಗರದ ವಿವಿಧ ದೇವಾಲಯಗಳ ಪ್ರಾಂಗಣದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಮತ್ತು ಅಹೋರಾತ್ರಿ ಭಜನೆ ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿ ಪಡಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದೀಗ ಈ ಬಗ್ಗೆ ವ್ಯಾಪಕ ಆಕ್ರೋಷ ವ್ಯಕ್ತವಾಗಿದೆ.

ಕಾವೂರು ಮಹಾಲಿಂಗೇಶ್ವರ ಮತ್ತು ಪಾಂಡೇಶ್ವರದಲ್ಲಿ ಪೊಲೀಸರು ಅಡ್ಡಿ ಪಡಿಸಿದ್ದಾರೆ ಎಂದು ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆರೋಪಿಸಿ ಪೊಲೀಸರ ವರ್ತನೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್4ರಂದು ಶಿವರಾತ್ರಿ ಜಾಗರಣೆಯ ದಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮತ್ತು ಪಾಂಡೇಶ್ವರದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾತ್ರಿ 11.30 ಗಂಟೆಗೆ ಪೊಲೀಸರು ಬಂದು ಕಾರ್ಯಕ್ರಮ ನಿಲ್ಲಿಸಲು ಪ್ರಯತ್ನಿಸಿರುವುದು ಪೊಲೀಸರ ಅತಿರೇಕದ ವರ್ತನೆಯಾಗಿದೆ. ಇಂತಹ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪೊಲೀಸರು ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಿ ಹೋದ ಬಳಿಕ ಈ ರೀತಿ ನಡೆದಿದೆ ಎಂದು ಆರೋಪಿಸಿದ್ದಾರೆ.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶಿವರಾತ್ರಿ ಜಾಗರಣೆ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನ ಹಾಗೂ ಭಜನಾ ಕಾರ್ಯಕ್ರಮಗಳನ್ನು ಸ್ಥಳೀಯ ಸರ್ಕಲ್ ಇನ್ಸ್​ಸ್ಪೆಕ್ಟರ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕ ವೈ.ಭರತ್ ಶೆಟ್ಟಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪ್ರದಾಯದ ಪ್ರಕಾರ ರಾತ್ರಿ ಪೂರ್ತಿ ನಡೆಯುವ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಏಕಾಏಕಿ ನುಗ್ಗಿದ ಪೊಲೀಸರು ಧ್ವನಿವರ್ಧಕದ ಶಬ್ದವನ್ನು ಪೂರ್ತಿ ಕಡಿಮೆ ಮಾಡಿ ಸಮಸ್ತ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಘಟನೆ ಖಂಡನೀಯವಾಗಿದ್ದು, ಪಣಂಬೂರು ಠಾಣೆಯ ಎಸಿಪಿ ಯಕ್ಷಗಾನ ನಡೆಯುತ್ತಿದ್ದಲ್ಲಿಗೆ ಬಂದು ಧ್ವನಿವರ್ಧಕದ ಶಬ್ಧ ಕಡಿಮೆ ಮಾಡಿದರು. ಇದರಿಂದ ಯಕ್ಷಗಾನ ಸ್ವಲ್ಪ ಹೊತ್ತು ನಿಂತೇ ಹೋಯಿತು. ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವುದರಿಂದ ಇಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಇರುತ್ತಾರೆ. ಅವರ ಬಳಿ ಪೊಲೀಸರು ಈ ಬಗ್ಗೆ ತಿಳಿಸಬಹುದಿತ್ತು. ಆದರೆ ಅದು ಯಾವುದನ್ನೂ ಪೊಲೀಸರು ಮಾಡಿಲ್ಲ ಎಂದು ಶಾಸಕರು ದೂರಿದ್ದಾರೆ.

ಘಟನೆ ವಿವರ :

ಶಿವರಾತ್ರಿ‌ ಪ್ರಯುಕ್ತ ಮಂಗಳೂರು ಹೊರವಲಯದ ಕಾವೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾಗರಣೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಾಂಗಣದಲ್ಲಿ ಯಕ್ಷಗಾನ ಮತ್ತು ಅಹೋರಾತ್ರಿ ಭಜನೆ ಆಯೋಜಿಸಲಾಗಿತ್ತು. ಶ್ರದ್ಧೆ ಹಾಗೂ ಭಕ್ತಿಯಿಂದ ನಡೆಯುತ್ತಿದ್ದ ಈ ಜಾಗರಣೆಗೆ ಪೊಲೀಸರು ಅಡ್ಡಿಯುಂಟು ಮಾಡಿದ್ದು, ಇದರಿಂದ ಭಕ್ತಾಧಿಗಳು ರೊಚ್ಚಿಗೆದ್ದಿದ್ದರು.

ಕಾವೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯಂದು ಪ್ರತಿವರ್ಷ ಜಾಗರಣೆ ನಡೆಯುತ್ತದೆ. ಪ್ರತಿವರ್ಷ ಯಕ್ಷಗಾನ, ಭಜನೆ ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿಯೂ ದೇವಸ್ಥಾನದಲ್ಲಿ ಸಾಯಂಕಾಲ 6 ರಿಂದ ಬೆಳಗ್ಗೆ 6ರ ವರೆಗೆ ಭಜನೆ ಹಮ್ಮಿಕೊಳ್ಳಲಾಗಿತ್ತು.

ಸಂಜೆ ದೇವಾಲಯದ ಪ್ರಾಂಗಣದಲ್ಲಿ ಕೊಲ್ಲಂಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನವನ್ನೂ ಏರ್ಪಡಿಸಲಾಗಿತ್ತು. ಎರಡೂ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿರುವ ವೇಳೆ ರಾತ್ರಿ ಆಗಮಿಸಿದ ಕಾವೂರು ಪೊಲೀಸರು ಎರಡನ್ನೂ ಈ ಕೂಡಲೇ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರಿಗೂ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಈ ವರ್ತನೆಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯಕ್ಷಗಾನ, ಭಜನಾ ಕಾರ್ಯಕ್ರಮ ರದ್ದುಪಡಿಸಲು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಸಂಘಟಕರು ಅದಕ್ಕೆ ಒಪ್ಪದಿದ್ದಾಗ ಧ್ವನಿವರ್ಧಕ ಸ್ಥಗಿತಗೊಳಿಸಿ ಕಾರ್ಯಕ್ರಮ ನಡೆಸಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ ಭರತ್ ಶೆಟ್ಟಿ ಮಧ್ಯ ಪ್ರವೇಶ ಮಾಡಿದ್ದಾರೆ. ಆದರೂ ಕಾರ್ಯಕ್ರಮ ಮುಂದುವರೆಸಲು ಬಿಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಕಾರ್ಯಕ್ರಮ ಮುಂದುವರೆದಿದೆ.

ಪೊಲೀಸರ ಈ ವರ್ತನೆಗೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರ ಆದೇಶ ಎಂದು ಆರೋಪಿಸಲಾಗುತ್ತಿದೆ. ಕಾವೂರು ಮಹಾಲಿಂಗೇಶ್ವರ ದೇವಾಲಯದ ಸಮೀಪದಲ್ಲಿರುವ ಮೇರಿಹಿಲ್ ಎಂಬಲ್ಲಿ ಐಜಿಪಿ ಬಂಗಲೆ ಇದ್ದು , ದೇವಾಲಯದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ಅರುಣ್ ಚಕ್ರವರ್ತಿ ಅವರ ನಿದ್ದೆ ಭಂಗಪಡಿಸಿದ್ದಕ್ಕೆ ಪೊಲೀಸರು ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಿದ್ದರು ಎಂಬ ಮಾತು ಕೇಳಿ ಬಂದಿದೆ.

ಇದೇ ರೀತಿಯ ಘಟನೆ ನಗರದ ಪಾಂಡೇಶ್ವರದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ನಡೆದಿದ್ದು, ಈ ಬಗ್ಗೆ ಹಲವಾರು ಮಂದಿ ಆಕ್ರೋಷಗೊಂಡಿದ್ದು, ಪೊಲೀಸರ ಈ ಕ್ರಮದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Comments are closed.