ಕರಾವಳಿ

ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಪೊಲೀಸ್ ಕಾರ್ಯಾಚರಣೆ : ಒಂದೇ ದಿನ 112 ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಮಾರ್ಚ್.06: ನಂಬರ್ ಪ್ಲೇಟ್ ಅಳವಡಿಸದ ವಾಹನಗಳು, ಕರ್ಕಶ ಹಾರ್ನ್, ನಿಯಮ ಉಲ್ಲಂಗಿಸಿ ಟಿಂಟ್ ಫಿಲಂ ಅಳವಡಿಕೆ, ನೋ ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್ ಮಾಡುವುದು ಮುಂತಾದ ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಮಂಗಳೂರಿನ ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಇತ್ತಿಚಿಗೆ ಮಾಹಿತಿ ನೀಡಿದರು.

ಇದೀಗ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರ ಸೂಚನೆಯಂತೆ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ನಗರ ಪೊಲೀಸರು ನಗರದಲ್ಲಿ ಕರ್ಕಶ ಹಾರ್ನ್ ಹಾಗೂ ಬ್ರೇಕ್ ಲೈಟ್ ಇಲ್ಲದ ಬಸ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದು, 112 ಪ್ರಕರಣ ದಾಖಲಿಸಿದ್ದಾರೆ.

ಕರ್ಕಶ ಹಾರ್ನ್‌ಗೆ ಸಂಬಂಧಿಸಿದಂತೆ 112 ಬಸ್‌ಗಳಿಂದ 11,200 ರೂ. ಹಾಗೂ ಬ್ರೇಕ್ ಲೈಟ್ ಇಲ್ಲದ 35 ವಾಹನಗಳಿಂದ 3,500 ರೂ. ದಂಡ ವಸೂಲಿ ಮಾಡಲಾಗಿದೆ.

ನಗರದ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಎರಡು ಕಾರು, 17 ಬೈಕ್‌ಗಳನ್ನು ಟೋಯಿಂಗ್ ವಾಹನ ಮೂಲಕ ಎತ್ತಂಗಡಿ ಮಾಡಿ ದಂಡ ವಿಧಿಸಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ನಿರಂತರವಾಗಿ ನಡೆಯಲಿದೆ. ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.